ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯ ಮೇಲುಕಾಮನಹಳ್ಳಿ ಗ್ರಾಮದ ಸುತ್ತಮುತ್ತ 50ಕ್ಕೂ ಹೆಚ್ಚಿನ ಕಾಡು ಹಂದಿಗಳು ಮೃತಪಟ್ಟಿದೆ. ನಿತ್ಯವೂ ಸಾವು ಮರುಕಳಿಸುತ್ತಿರುವುದರಿಂದ ಗಿರಿಜನರು ಹಾಗೂ ರೈತರಿಗೆ ಆತಂಕ ಉಂಟು ಮಾಡಿದೆ. ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ಮೂರ್ನಾಲ್ಕು ಹಂದಿಗಳು ಅಲ್ಲಲ್ಲಿ ಸತ್ತು ಬೀಳುತ್ತಿವೆ. ಈ ಕಾಯಿಲೆಗಳು ಜನ-ಜಾನುವಾರುಗಳಿಗೂ ತಗುಲುತ್ತದೆ ಎಂಬ ಭಯ ಇಲ್ಲಿನ ಜನರದ್ದು.
ಈ ಭಾಗದಲ್ಲಿ ಹಂದಿಗಳು ವಿಷ ಪ್ರಾಷನದಿಂದಾಗಲಿ, ಬೇಟೆಯಾಡುವವರು ಬಳಸುವ ನಾಡಮದ್ದು ತಿಂದು ಸಾಯದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇತರೆ ವನ್ಯಜೀವಿಗಳಿಗೆ ಏನಾದರೂ ತೊಂದರೆಯಾಗಲಿದೆಯೇ ಎಂಬ ಚಿಂತೆಯಲ್ಲಿ ಅರಣ್ಯ ಇಲಾಖೆ ಇದೆ. ಪಶುವೈದ್ಯರು ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಹಂದಿಯನ್ನು ಮರಣೋತ್ತರ ಪರೀಕ್ಷೆ ನಡೆಸಿ ಅದರ ಅಂಗಾಂಗಗಳನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.