ಚಾಮರಾಜನಗರ: ನರಭಕ್ಷಕ ಹುಲಿ ದಾಳಿಗೆ ಮತ್ತೋರ್ವ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಮಕ್ಕಳ ಮಲ್ಲಪ್ಪ ದೇವಾಲಯದ ಬಳಿ ನಡೆದಿದೆ.
ಹುಲಿ ದಾಳಿಯಿಂದ ಮೃತಪಟ್ಟ ಶಿವಲಿಂಗಪ್ಪ ಇಲ್ಲಿನ ಚೌಡಹಳ್ಳಿ ಗ್ರಾಮದ ಶಿವಲಿಂಗಪ್ಪ(55) ಹುಲಿ ದಾಳಿಗೆ ಬಲಿಯಾದವರು. ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಏಕಾಏಕಿ ಮೇಲೆ ಎರಗಿದ ಹುಲಿ ಕತ್ತಿಗೆ ಬಾಯಿ ಹಾಕಿದೆ. ಪಕ್ಕದ ಜಮೀನಿನಲ್ಲಿದ್ದ ಗ್ರಾಮಸ್ಥರು ಹುಡುಕಾಟ ಪ್ರಾರಂಭಿಸಿದಾಗ ಪೊದೆ ಬಳಿ ಕೊಂದು ಹುಲಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:ಸ್ಥಳದಲ್ಲಿ ಅರಣ್ಯ ಇಲಾಖೆ ವಿರುದ್ಧ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಳೆದ ಸೆ. 1ರಂದು ಚೌಡಹಳ್ಳಿ ಗ್ರಾಮದವರೇ ಆದ ಶಿವಮಾದಯ್ಯ ಎಂಬುವವರನ್ನು ಹುಲಿ ಕೊಂದು ತಿಂದಿತ್ತು. ಬಳಿಕ, ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರಾದರೂ ಹುಲಿ ಕಾಣಿಸಿಲ್ಲ ಎಂದು ಹೇಳಲಾಗಿತ್ತು.
ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿಯಾಗಿದ್ದು, ಚೌಡಹಳ್ಳಿ, ಹುಂಡಿಪುರ, ಕೆಬ್ಬೇಪುರ ಗ್ರಾಮಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.