ಚಾಮರಾಜನಗರ:ಕೊರೊನಾ ಲಸಿಕೆ ಹಾಕಿಸಿಕೊಂಡರೆ ಸಾವನ್ನಪ್ಪುತ್ತಾರೆಂಬ ವದಂತಿಗೆ ಬೆಚ್ಚಿಬಿದ್ದ ಈ ಊರಿನ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ, ಇಂದು ಲಸಿಕೆ ಬೇಕೆಂದರೂ ಸಿಗದಂತಹ ಪರಿಸ್ಥಿತಿ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಗೋಪಿನಾಥಂನಲ್ಲಿ ನಿರ್ಮಾಣಗೊಂಡಿದೆ.
ಕೇವಲ 11 ಮಂದಿಗೆ ಮಾತ್ರ ಲಸಿಕೆ
ಲಸಿಕೆ ಹಾಕಿಸಿಕೊಂಡ ಬಳಿಕ ತಮಿಳು ನಟ ವಿವೇಕ್ ಮೃತಪಟ್ಟಿದ್ದು ಸೇರಿದಂತೆ ಹತ್ತು ಹಲವು ಗಾಳಿ ಸುದ್ದಿಗಳು ಗೋಪಿನಾಥಂ ಸೇರಿದಂತೆ ಅದರ ಗ್ರಾಮ ಪಂಚಾಯ್ತಿಗೆ ಒಳಪಡುವ 6 ಊರುಗಳಲ್ಲಿ ಹರಿದಾಡಿದೆ. ಹೀಗಾಗಿ ಒಟ್ಟು 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಈ ಗ್ರಾಮ ಪಂಚಾಯ್ತಿಯಲ್ಲಿ ಅಂದು ಲಸಿಕೆ ಹಾಕಿಸಿಕೊಂಡವರು ಕೇವಲ 11 ಮಂದಿಯಷ್ಟೇ. ಅದಾದ ಬಳಿಕ, ಕೆಲ ದಿನಗಳಿಂದ ಕೋವಿಡ್ ಪಾಸಿಟಿವ್ ಕೇಸ್ಗಳು ಹೆಚ್ಚಾಗುತ್ತಿರುವುದರಿಂದ ಲಸಿಕೆ ಅಗತ್ಯತೆ ಮನಗಂಡಿದ್ದಾರೆ. ಆದರೆ ಇದೀಗ ಲಸಿಕೆ ಬೇಕೆಂದರೂ ಗ್ರಾ.ಪಂಗೆ ಪೂರೈಕೆಯಾಗ್ತಿಲ್ಲ ಎಂದು ಗ್ರಾಮಸ್ಥರಾದ ಮಣಿಕಂಠ, ಶಕ್ತಿವೇಲು ಎಂಬವರು ಈಟಿವಿ ಭಾರತದೊಂದಿಗೆ ಅಲಳು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಶವ ಹೊತ್ತ ಆ್ಯಂಬುಲೆನ್ಸ್ಗೆ ಸ್ವತಃ ತಾವೇ ಚಾಲಕರಾದ ರೇಣುಕಾಚಾರ್ಯ
ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಕಿಸಿಕೊಂಡಿಲ್ಲ ಲಸಿಕೆ
ಕಳೆದ ತಿಂಗಳು ಆರೋಗ್ಯ ಇಲಾಖೆ ಲಸಿಕೆ ಅಭಿಯಾನದ ಅಂಗವಾಗಿ ಗೋಪಿನಾಥಂಲ್ಲಿ ಕ್ಯಾಂಪ್ ಹಾಕಿದರೂ ಯಾರೊಬ್ಬರೂ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿರಲಿಲ್ಲ. ಲಸಿಕೆ ಬೇಡವೆಂದು ನಿರಾಕರಿಸಿದವರಲ್ಲಿ ಗೋಪಿನಾಥಂ ಗ್ರಾಪಂ ಅಧ್ಯಕ್ಷೆಯೂ ಇದ್ದರು ಎಂಬುದು ಲಸಿಕೆ ಕುರಿತು ಗ್ರಾಮದಲ್ಲಿ ವದಂತಿ ಉಂಟು ಮಾಡಿದ್ದ ಭೀತಿಗೆ ಸಾಕ್ಷಿಯಾಗಿತ್ತು. 15 ದಿನಗಳಿಂದ ಗೋಪಿನಾಥಂ ಗ್ರಾಪಂಗೆ ಒಳಪಡುವ ಗೋಪಿನಾಥಂ, ಪುದೂರು, ಹೊಗೆನಕಲ್, ಕೋಟೆಯೂರು, ಆಲಂಬಾಡಿ ಸೇರಿದಂತೆ 7 ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಹಿರಿಯರಷ್ಟೇ ಅಲ್ಲದೇ ಯುವಕರು ಸೋಂಕಿತರಾಗಿ ಬಾಧೆಗೊಳಗಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಕೊರೊನಾ ಟೆಸ್ಟ್ಗಳನ್ನು ಹೆಚ್ಚು ನಡೆಸುವಂತೆ ಮತ್ತು ಲಸಿಕೆ ನೀಡುವಂತೆ ಒತ್ತಾಯಿಸಿದ್ದರು.
ಇದೀಗ ಸಿಗುತ್ತಿಲ್ಲ ಕೊರೊನಾ ವ್ಯಾಕ್ಸಿನ್
ಆ ವೇಳೆ ಲಸಿಕೆ ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದರು. ಆದರೆ ಲಸಿಕೆ ಕ್ಯಾಂಪ್ ಇನ್ನು ನಮ್ಮ ಗ್ರಾಮಕ್ಕೆ ಬಂದಿಲ್ಲ, ಹಲವರು ಜ್ವರ-ಶೀತದಿಂದ ಬಳಲುತ್ತಿರುವುದರಿಂದ ದೂರ ದೂರುಗಳಿಗೆ ತೆರಳಿ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮದ ಮಣಿಕಂಠ ತಿಳಿಸಿದರು. ಈ ಹಿಂದೆ ಆ ರೀತಿಯ ಭಯ ನಮ್ಮಲ್ಲಿ ಆವರಿಸಿತ್ತು. ಈಗ ಲಸಿಕೆ ಕೊಡಿ ಎನ್ನುತ್ತಿದ್ದೇವೆ ಆದರೆ ಸಿಗುತ್ತಿಲ್ಲ ಎಂದು ಗ್ರಾಮದ ಮತ್ತೋರ್ವರಾದ ಶಕ್ತಿವೇಲ್ ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ, ಅಂದು ಲಸಿಕೆ ಬಂದಿದ್ದ ವೇಳೆ ವದಂತಿ ನಂಬಿ ಲಸಿಕೆ ಪಡೆಯದೇ ಈಗ ಲಸಿಕೆ ಬೇಕೆಂದರೂ ಸಿಗದ ಸಂದಿಗ್ಧ ಸ್ಥಿತಿಗೆ ಈ ಕಾಡಂಚಿನ ಗ್ರಾಮ ಸಿಲುಕಿಕೊಂಡಿದೆ.