ಚಾಮರಾಜನಗರ:ಸತ್ತವರು ಸ್ವರ್ಗ ಸೇರುತ್ತಾರೋ ಇಲ್ಲಾ ಯಮಲೋಕಕ್ಕೆ ಹೋಗುತ್ತಾರೊ ತಿಳಿಯದು. ಆದರೆ, ಶವ ಹೊರುವವರಿಗೆ, ಮೆರವಣಿಗೆಯಲ್ಲಿ ತೆರಳುವರಿಗಿಂತಲೂ ಈ ಗ್ರಾಮದಲ್ಲಿ ನರಕ ದರ್ಶನ ಆಗಲಿದೆ.
ಹೌದು, ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಗೆ ಬರುವ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಪರಿಶಿಷ್ಟ ಜಾತಿಯವರು ಗೋಮಾಳದಲ್ಲಿ ಅಂತ್ಯಸಂಸ್ಕಾರ ನಡೆಸುತ್ತಾ ಬಂದಿದ್ದು, ಕಾಲುಸಂಕದ ಮೂಲಕ ಜೀವ ಕೈಯಲ್ಲಿ ಹಿಡಿದು ಸತ್ತವರಿಗೆ ಮುಕ್ತಿ ಕೊಡಿಸಬೇಕಿದೆ. ಖಾಸಗಿ ಜಮೀನಿನ ಮಧ್ಯೆ ಹರಿಯುವ ಹೊನ್ನಹೊಳೆಯನ್ನು ಬೇಸಿಗೆಯಲ್ಲಾದರೇ ಸರಾಗವಾಗಿ ದಾಟಬಹುದು ಮಳೆಗಾಲದಲ್ಲಂತೂ ದುಸ್ಸಾಹಸವನ್ನೇ ಮಾಡಬೇಕಿದೆ.
ಯಳಂದೂರು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಮಾಂಬಳ್ಳಿಯೂ ಒಂದಾಗಿದ್ದು, ಇದೇ ಗ್ರಾಮದ ಜಯಣ್ಣ ಶಾಸಕರಾಗಿಯೂ ಇದ್ದರು. ಈಗಿನ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಅವರ ತಂದೆಯ ಹುಟ್ಟೂರು ಕೂಡ ಮಾಂಬಳ್ಳಿಯಾಗಿದ್ದರೂ ಸತ್ತವರಿಗೆ ಮುಕ್ತಿ ಕೊಡಲು ಬದುಕಿರುವವರು ನರಕ ನೋಡುತ್ತಿರುವುದು ವಿಪರ್ಯಾಸವೇ ಆಗಿದೆ.
ಸಾಕಷ್ಟು ಟೀಕೆ, ಆಕ್ರೋಶ: ಅನಾರೋಗ್ಯದಿಂದ ಭಾನುವಾರ ಮೃತಪಟ್ಟ ಮಾನಸ ಗಂಗೋತ್ರಿ ವಿದ್ಯಾರ್ಥಿ ಹೋರಾಟಗಾರ, ಎಂಫಿಎಲ್ ಪದವೀಧರರಾಗಿದ್ದ ಕೇಶವಮೂರ್ತಿ ಅವರ ಅಂತ್ಯ ಸಂಸ್ಕಾರಕ್ಕಾಗಿ ಕಾಲುಸಂಕದ ಮೂಲಕ ಹಾದು ಹೋಗಿದ್ದ ನೂರಾರು ವಿದ್ಯಾರ್ಥಿಗಳು ನರಕ ದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಜಿಲ್ಲಾಡಳಿತ, ಶಾಸಕ ಎನ್.ಮಹೇಶ್, ಹಿಂದಿನ ಶಾಸಕರರಾಗಿದ್ದ ಜಯಣ್ಣ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಹೊಸ ಸ್ಮಶಾನಕ್ಕೆ ಜಾಗವನ್ನಾದರೂ ಕೊಡಿ ಇಲ್ಲವೇ ಕನಿಷ್ಠ ಕಿರು ಸೇತುವೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊಳ್ಳೇಗಾಲದಿಂದ 8 - 9 ಕಿಮೀ ದೂರದಲ್ಲಿರುವ ಮಾಂಬಳ್ಳಿಯ ದಶಕದ ಸಮಸ್ಯೆ ಈಗಲಾದರೂ ಮುಕ್ತಿ ಕೊಡಿಸಿ ಸತ್ತವರ ಆತ್ಮಕ್ಕೆ ನಿರ್ಭೀತಿಯಿಂದ ಶಾಂತಿ ಕೋರುವಂತಾಗಬೇಕಿದೆ.