ಚಾಮರಾಜನಗರ: ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೆತ್ತೆ ಕಾರಿನ ಚಕ್ರಕ್ಕೆ ಸಿಲುಕಿಕೊಂಡು ಕಾರೊಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ನಡೆದಿದೆ. ಕೇರಳದ ನೋಂದಣಿ ಹೊಂದಿರುವ ಕಾರೊಂದು ಹೊನ್ನೇಗೌಡನಹಳ್ಳಿ-ಗೋಪಾಲಪುರ ರಸ್ತೆಯಲ್ಲಿ ಸಂಚರಿಸುತ್ತಿತ್ತು. ರಸ್ತೆ ಮೇಲೆ ಹಾಕಿದ್ದ ಹುರುಳಿ ಸೆತ್ತೆ ಕಾರಿನ ಚಕ್ರಕ್ಕೆ ಸುತ್ತಿಕೊಂಡಿದೆ. ಕ್ಷಣಮಾತ್ರದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ 6 ಮಂದಿ ಯುವಕರು ತಮ್ಮ ವಸ್ತುಗಳ ಸಮೇತ ಕೆಳಗಿಳಿದಿದ್ದಾರೆ.
ನೋಡು ನೋಡುತ್ತಿದ್ದಂತೆ ಕಾರಿಗೆ ಬೆಂಕಿ ಆವರಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿದ್ದ ಕೆಲವರು ಬೆಂಕಿ ನಂದಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ರಸ್ತೆಯಲ್ಲಿ ಹಾಕಿದ್ದ ಹುರುಳಿ ಒಕ್ಕಣೆಯಿಂದ ಕಾಣಿಸಿಕೊಂಡ ಬೆಂಕಿ: ಓಮ್ನಿ ಸಂಪೂರ್ಣ ಭಸ್ಮ
ಕಳೆದ 2019 ರಲ್ಲಿ ಸಹ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿದ್ದ ಕಾರಣ ಕೇರಳ ರಾಜ್ಯದವರಿಗೆ ಸೇರಿದ ಮಾರುತಿ ವ್ಯಾನ್ ಹೊತ್ತಿ ಉರಿದಿತ್ತು. ಹುರುಳಿ ಸೊಪ್ಪು ವ್ಯಾನ್ನ ಚಕ್ರಕ್ಕೆ ಸಿಲುಕಿಕೊಂಡು ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸೇರಿದಂತೆ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಇದರೊಟ್ಟಿಗೆ, ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕೂಡ ಸಂಪೂರ್ಣ ಭಸ್ಮವಾಗಿತ್ತು.