ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರತಿಕ್ರಿಯೆ.. ಚಾಮರಾಜನಗರ:ವರುಣಾದ ರಸ್ತೆಗಳು, ಕ್ಷೇತ್ರದಲ್ಲಿ ಅವ್ಯವಸ್ಥೆ ಹೇಗಿದೆ ಎಂದು ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ ಎಂದು ಸಿದ್ದು ಎದುರಾಳಿ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು. ಚಾಮರಾಜನಗರದಲ್ಲಿ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ. ಅದೆಷ್ಟು ಚೆನ್ನಾಗಿ ರಸ್ತೆಗಳಿವೆ, ಯಾವ ರೀತಿ ಅವ್ಯವಸ್ಥೆ ಇದೆ. ಯಾವ ರೀತಿ ಜನರು ಒದ್ದಡ್ತಿದ್ದಾರೆ ಎಂದು ನೋಡಲಿ. ನಾನು ಒಬ್ಬನೇ ಅವರ ಜತೆಗೆ ಬರ್ತೀನಿ, ಹೋಗೋಣ. ಸಿದ್ದರಾಮಯ್ಯ ಕರೆದರೆ ನಾನು ಹೋಗಲೂ ಸಿದ್ದ. ಹೋಗಿ ಸುತ್ತಾಡೋಣ ಎಂದು ಸವಾಲು ಹಾಕಿದರು.
ಜನರು ತೀರ್ಮಾನ ಮಾಡ್ತಾರೆ: ಅವರು ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದೆ ಅನ್ಸಿದ್ರೆ, ಅವರಿಗೆ ನಮಸ್ಕಾರ ಮಾಡಿ ನಾನು ಏನೂ ಮಾತನಾಡಲ್ಲ. ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಎಲ್ಲವನ್ನೂ ಜನರು ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ ಅವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಬಿಟ್ಟು ವಾಸ್ತವಾಂಶಕ್ಕೆ ಗಮನ ಕೊಟ್ರೆ ಒಳ್ಳೆಯದು ಎಂದು ಕಿವಿಮಾತು ಹೇಳಿದರು.
ವರುಣಾದಲ್ಲಿ ಪ್ರಚಾರಕ್ಕೆ ಅಡ್ಡಿ ಸಂಬಂಧ ಪ್ರತಿಕ್ರಿಯಿಸಿದ ಸೋಮಣ್ಣ "ಒಂದು ದಿನ ಅಲ್ಲ. ದಿನವೂ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಾಪ್ ಸಿಂಹ ಅವರಿಂದಲೇ ಗಲಾಟೆಯಾಗುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ "ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನನಗೆ ಸಹೋದರನಂತೆ. ಪಕ್ಷದ ಭವಿಷ್ಯದ ನಾಯಕ. ವಾಸ್ತವಾಂಶ ಇರೋದನ್ನು ಮಾತನಾಡುತ್ತಾರೆ. ನಿಮ್ಮವರೇ ಜಗಳ ಮಾಡಿಸುತ್ತಿರುವುದು. ಅವರು ಬಿಟ್ರೆ ಬೇರೆ ಯಾರೂ ಇಲ್ಲ. ನ್ಯಾಯಸಮ್ಮತ ಚುನಾವಣೆ ನಡೆಯಲಿ. 10ನೇ ತಾರೀಖು ಅದು ತೀರ್ಮಾನವಾಗಲಿ ಎಂದರು.
ಇದೇ ವೇಳೆ, ವರುಣಾದಲ್ಲಿ ಗಲಾಟೆ ಮಾಡಿಸಿದ್ದು ಸೋಮಣ್ಣ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ "ಸಿದ್ದರಾಮಯ್ಯ ಮತ್ತೆ ಯಾಕೆ ಈ ರೀತಿ ಮಾಡಿ ಚಿಕ್ಕವರಾಗ್ತಿದ್ದಾರೋ ಗೊತ್ತಿಲ್ಲ. ನಾವೇನೂ ಕಾಲು ಕೆರೆದುಕೊಂಡು ಹೋಗಿರಲಿಲ್ಲ. ನಾವು ಪ್ರಚಾರಕ್ಕೆ ಹೋದರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ. ಆಚೆಗೆ ಹೋಗಬಾರದು ಅಂತಾರೆ. ಇವೆಲ್ಲ ಮಾಡುತ್ತಿರುವುದು ಒಂದೇ ವರ್ಗದ ಜನ" ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಸಿದ್ದರಾಮಯ್ಯ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನೀವೂ ಗೆಲ್ಲೊದಾದರೆ ಇದೆಲ್ಲಾ ನಿಮಗೆ ಯಾಕೆ ಬೇಕು?. ಪೊಲೀಸ್ನವರಿಗೆ ಹಿಡಿದುಕೊಟ್ಟರೇ ಅವರು ಬಿಟ್ಟು ಕಳುಹಿಸುತ್ತಾರೆ. ಗಲಾಟೆ ಮಾಡಿದವರ ಮೇಲೆ 326ರ ಅಡಿ ಪ್ರಕರಣ ದಾಖಲಿಸಬೇಕು. ಏನಾದರೂ ಪಿತೂರಿ ಮಾಡಲಿ. ಭಗವಂತ, ಚಾಮುಂಡಿ ತಾಯಿ ಇದ್ದಾರೆ. ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಎಂದರೆ ಕ್ಷೇತ್ರದ ಜನರು ಸಹಾಯ ಮಾಡುತ್ತಾರೆ. ಮಾಡ್ದೆ ಇದ್ರೆ ನನಗೇನೂ ಬೇಜಾರು ಇಲ್ಲ ಎಂದು ಸಿದರಾಮಯ್ಯಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ