ಚಾಮರಾಜನಗರ: ಕೆರೆಯಲ್ಲಿ ಈಜಲು ಹೋದ ಮೂವರು ಪಿಯು ವಿದ್ಯಾರ್ಥಿಗಳಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಮರಾಜನಗರ ತಾಲೂಕಿನ ಶಿವಗಂಗೆ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ.
ಕೆರೆ ಆಳ ಅರಿಯದೆ ನೀರಿಗಿಳಿದ ಯುವಕರು: ಪಿಯು ವಿದ್ಯಾರ್ಥಿ ಸಾವು, ಇಬ್ಬರ ರಕ್ಷಣೆ - ಶಿವಗಂಗೆ ಕೆರೆ
ಚಾಮರಾಜನಗರ ತಾಲೂಕಿನ ಶಿವಗಂಗೆ ಕೆರೆಯಲ್ಲಿ ಮುಳುಗಿ ಓರ್ವ ಮೃತಪಟ್ಟಿದ್ದಾನೆ. ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ವಿನೋದ್ ರಾಜ್ (17) ಮೃತ ವಿದ್ಯಾರ್ಥಿ. ಕೆರೆಯಲ್ಲಿ ನೀರು ತುಂಬಿರುವುದನ್ನು ಅರಿತು ವಿನೋದ್ನ ಸೋದರ ಮಾವ ಸೇರಿದಂತೆ ಮೂವರು ಈಜಲು ತೆರಳಿದ್ದರು. ಈ ವೇಳೆ ಕೆರೆಯ ಆಳವನ್ನು ಅರಿಯದೇ ನೀರಿನಲ್ಲಿ ಸಿಲುಕಿದ್ದಾರೆ. ಕೂಡಲೇ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಮಹೇಶ್ ಹಾಗೂ ಮೂರ್ತಿಯನ್ನ ಎಂಬಿಬ್ಬರನ್ನು ರಕ್ಷಿಸಿದ್ದಾರೆ. ಆದರೆ ವಿನೋದ್ ರಾಜ್ ಅಷ್ಟರಲ್ಲಾಗಲೇ ಮುಳುಗಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಸದ್ಯ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿದ್ದಾರೆ.