ಗುಂಡ್ಲುಪೇಟೆಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ರೋಡ್ ಶೋ ಚಾಮರಾಜನಗರ: ಮತದಾನಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಚುನಾವಣಾ ರಂಗು ಹೆಚ್ಚುತ್ತಿದೆ. ಇಂದು (ಸೋಮವಾರ) ಗುಂಡ್ಲುಪೇಟೆಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಇಂದು 11:20ರ ಸುಮಾರಿಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿಯಲಿದ್ದಾರೆ. ನಂತರ 11:30ರ ಸಮಯಕ್ಕೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-766 ಮೂಲಕ ಚಾಮರಾಜನಗರ ರಸ್ತೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಪೊಲೀಸ್ ಬಿಗಿ ಭದ್ರತೆ: ಗುಂಡ್ಲುಪೇಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 800 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ರೋಡ್ ಶೋ ನಡೆಯುವ ಸ್ಥಳಗಳಲ್ಲಿ ಪೊಲೀಸ್ ಸರ್ವಗಾವಲು ವ್ಯವಸ್ಥೆ ಸಹ ಮಾಡಲಾಗಿದೆ.
ಕೈ ಅಭ್ಯರ್ಥಿ ವ್ಯಂಗ್ಯ:ಅಮಿತ್ ಶಾ ರೋಡ್ ಶೋ ವೇಳೆ ಬಿಜೆಪಿ ಕಾರ್ಯಕರ್ತರು ರಸ್ತೆ ಬದಿ ಚರಂಡಿ ಮೇಲೆ ನಿಲ್ಲಬೇಡಿ. 40 ಪರ್ಸೆಂಟ್ ಪರಿಣಾಮ ಅದು ಕುಸಿಯಲಿದೆ ಎಂದು ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಇಂದು ಅಮಿತ್ ಶಾ ಗುಂಡ್ಲುಪೇಟೆಯಲ್ಲಿ ರೋಡ್ ಶೋ ನಡೆಸಲಿರುವ ಸಂಬಂಧ ಪತ್ರಿಕಾ ಪ್ರಕಟಣೆ ಕೊಟ್ಟಿರುವ ಕೈ ಅಭ್ಯರ್ಥಿ ಗಣೇಶ್ ಪ್ರಸಾದ್, 40 ಪರ್ಸೆಂಟ್ ಪರಿಣಾಮ ಈಗಾಗಲೇ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗಳು 40ಕ್ಕೂ ಹೆಚ್ಚು ಕಡೆ ಕುಸಿದಿದೆ. ನಮಗೆ ಜನರ ರಕ್ಷಣೆ ಮುಖ್ಯ. ಪಕ್ಷ ಯಾವುದಾದರೇನು ಎಂದು ಬಿಜೆಪಿ ಶಾಸಕ ನಿರಂಜನ ಕುಮಾರ್ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ.
ಆಕ್ಸಿಜನ್ ದುರಂತವಾದಾಗ ನಮ್ಮ ಜಿಲ್ಲೆಗೆ ಬಾರದ ನಾಯಕರು ಇದೀಗ ಚುನಾವಣೆ ಬಂದಿದೆ ಅಂತಾ ಬರುತ್ತಿದ್ದಾರೆ. ಪಾಪ ಬರಲಿ, ನಾವು ಅವರನ್ನು ಬರಬೇಡಿ ಅಂತ ಹೇಳಲ್ಲ. ಬಂದು ಸುಮ್ಮನೆ ಹೋಗಬೇಡಿ. ಜನರ ಬಳಿ ಹೋಗಿ ಇವರ 40 ಪರ್ಸೆಂಟ್ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಲಿ. ರೋಡ್ ಶೋ ನಡೆಸುವಾಗ ಅಮಿತ್ ಶಾ ಎಡ ಬಲಗಡೆ ಸ್ವಲ್ಪ ಕಣ್ಣಾಯಿಸಬೇಕು. ಅವರ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಅಂತ ಯಾಕೆ ಕರೆಯುತ್ತಾರೆ ಎಂದು ತಿಳಿಯಲಿದೆ ಎಂದು ಕಿಡಿಕಾರಿದ್ದಾರೆ.
ಸೋಲೋ ಭಯ ಇರೋದಕ್ಕೆ ಬಿಜೆಪಿಗರ ಪ್ರಕಾರ ಚಾಣಕ್ಯ ಅವರನ್ನು ಕರೆಸುತ್ತಿದ್ದಾರೆ. ಕರಿಸಿಕೊಳ್ಳಲಿ ನಮಗೇನು ಭಯವಿಲ್ಲ. ಚುನಾವಣೆ ನೆಪದಲ್ಲಾದರೂ ಚಾಣಕ್ಯ ಬರುತ್ತಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಬಿಜೆಪಿ ನಾಯಕರು ಸಾಂತ್ವನ ಹೇಳಲಿಲ್ಲ. ಕಾಂಗ್ರೆಸ್ ನಾಯಕರು ಸಾಂತ್ವನ ಹೇಳಿ ಕೆಪಿಸಿಸಿ ಸಾವನ್ನಪ್ಪಿದ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ಕೊಟ್ಟಿದೆ ಎಂದರು.
ಇಂದು ಅಮಿತ್ ಶಾ ಗುಂಡ್ಲುಪೇಟೆಯಲ್ಲಿ 1 ತಾಸಿಗೂ ಹೆಚ್ಚು ಕಾಲ ರೋಡ್ ಶೋ ನಡೆಸಲಿದ್ದು ಬಿಜೆಪಿ ಅಭ್ಯರ್ಥಿ ಪರ ಮತಬೇಟೆ ನಡೆಸಲಿದ್ದಾರೆ. ಈ ವೇಳೆ ಸಚಿವ ಸೋಮಣ್ಣ, ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ ಕುಮಾರ್, ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಸೇರಿದಂತೆ ಬಿಜೆಪಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಮಂಗಳವಾರ ಪ್ರಿಯಂಕಾ ಗಾಂಧಿ ಹನೂರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲಿದ್ದಾರೆ.
ಇದನ್ನೂ ಓದಿ:ಮಳೆಯಿಂದ ರೋಡ್ ಶೋ ರದ್ದು: ದೇವನಹಳ್ಳಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆಂದು ಅಮಿತ್ ಶಾ ಟ್ವೀಟ್