ಚಾಮರಾಜನಗರ: ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಕೃಷಿ ಇಲಾಖೆ ಬಂಪರ್ ಪ್ಯಾಕೇಜ್ ನೀಡುತ್ತಿದೆ.
ಏನಿದು ಪ್ಯಾಕೇಜ್ ?:ಒಬ್ಬ ರೈತನಿಗೆ ಇಲಾಖೆಯ ಎಲ್ಲಾ ಸಬ್ಸಿಡಿ ಕಾರ್ಯಕ್ರಮಗಳನ್ನು ಕೊಟ್ಟು ಸಮಗ್ರ ಕೃಷಿ ಪದ್ಧತಿ ಮೂಲಕ ಆತನ ಆದಾಯ ಹೆಚ್ಚಿಸುವ ಯೋಜನೆ ಇದಾಗಿದೆ. ಇದರಿಂದ ಒಬ್ಬ ರೈತನಿಗೆ ಗರಿಷ್ಠ 1.25 ಲಕ್ಷ ಸಹಾಯಧನ ಸಿಗಲಿದ್ದು, ನರೇಗಾ ಯೋಜನೆ ಮೂಲಕ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದೆ. 55 ಮಂದಿ ಮಳೆಯಾಶ್ರಿತ ರೈತರು ಹಾಗೂ 10 ಮಂದಿ ನೀರಾವರಿ ಭೂಮಿ ಹೊಂದಿರುವ ರೈತರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು.
ಕೃಷಿ ಇಲಾಖೆ ಬಂಪರ್ ಪ್ಯಾಕೇಜ್ ಕುರಿತು ಮಾಹಿತಿ ನೀಡಿದ ಚಂದ್ರಕಲಾ ಈ ಪ್ಯಾಕೇಜ್ನಲ್ಲಿ ರೈತರಿಗೆ ಕೃಷಿ ಹೊಂಡ, ಸಸ್ಯಬೇಲಿ, ಬದು ನಿರ್ಮಾಣ, ಕುರಿ, ಮೇಕೆ, ಕೋಳಿ ಸಾಕಾಣಿಕೆ, ಮೇವಿನ ಬೆಳೆ, ಎರೆಹುಳು ಗೊಬ್ಬರ ತಯಾರಿಕೆ, ಅಜೋಲಾ, ಮರ ಆಧಾರಿತ ಕೃಷಿ, ಕೈತೋಟ ನಿರ್ಮಾಣ, ಮೀನುಗಾರಿಕೆ, ಜೇನು ಕೃಷಿ ಎಲ್ಲವನ್ನೂ ಅಳವಡಿಸಿಕೊಳ್ಳಲು ಸರ್ಕಾರ ಶೇ.50 ರಷ್ಟು ಸಹಾಯಧನ ನೀಡಲಿದೆ. ನರೇಗಾ ಮೂಲಕ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದ್ದು ಕನಿಷ್ಠ ಒಂದು ಎಕರೆಗಿಂತ ಹೆಚ್ಚಿನ ಭೂಮಿ ಇರುವ ರೈತರು ಈ ಪ್ಯಾಕೇಜ್ಗೆ ಅರ್ಹರು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚಂದ್ರಕಲಾ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಾಯೋಗಿಕವಾಗಿ ಪ್ರತಿ ಗ್ರಾ.ಪಂ.ಗೆ ಓರ್ವ ರೈತರಂತೆ ಈ ಯೋಜನೆಗೆ ಆಯ್ಕೆ ಮಾಡಲಿದ್ದು, ಬೇರೆ ಬೇರೆಯಾಗಿ ಕೊಡುತ್ತಿದ್ದ ಕಾರ್ಯಕ್ರಮಗಳೆಲ್ಲವೂ ಒಂದೇ ಯೋಜನೆಯಡಿ ಬಂದಿದೆ. ರೈತರು ಒಂದೇ ಬೆಳೆಗೆ ಸೀಮಿತವಾಗದೇ ಸಮಗ್ರ ಕೃಷಿ ಮೂಲಕ ಆದಾಯ ಹೆಚ್ಚಿಸಿಕೊಳ್ಳುವುದು ಈ ಯೋಜನೆಯ ಉದ್ದೇಶ ಎಂದು ತಿಳಿಸಿದರು.