ಚಾಮರಾಜನಗರ: ಒಂದಡಿ ಜಾಗಕ್ಕೂ ಕೋರ್ಟ್ ಮೆಟ್ಟಿಲೇರುವ ಈ ಕಾಲಘಟ್ಟದಲ್ಲಿ ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ ರೈತನೋರ್ವ ಆರೋಗ್ಯ ಕೇಂದ್ರಕ್ಕೆ ಜಮೀನು ದಾನ ಮಾಡಿದ್ದಾರೆ.
ಹನೂರು ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದಿದ್ದರಿಂದ ಸರ್ಕಾರ ಏನು ಮಾಡಲಾರದ ಸ್ಥಿತಿಯಲ್ಲಿತ್ತು. ಈ ವೇಳೆ, ಆಸ್ಪತ್ರೆಯ ಅವಶ್ಯಕತೆ ಅರಿತ ಕೆಂಚಯ್ಯನದೊಡ್ಡಿ ಗ್ರಾಮದ ಕೆ.ವಿ. ಸಿದ್ದಪ್ಪ ಎಂಬ ರೈತ ಎಲ್ಲೆಮಾಳ ಗ್ರಾಮದಲ್ಲಿದ್ದ ತಮ್ಮ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದಾರೆ.
ಜಮೀನಿನ 60X40 ಜಾಗವನ್ನು ಆರೋಗ್ಯ ಉಪಕೇಂದ್ರಕ್ಕೆ ಕೊಟ್ಟಿದ್ದು ನಿರ್ಮಾಣವಾಗಲಿರುವ ಕಟ್ಟಡಕ್ಕೆ ತನ್ನ ಹಾಗೂ ಪತ್ನಿಯ ಹೆಸರನ್ನು ಇಡುವಂತೆ ಕೋರಿದ್ದಾರೆ. ಇನ್ನು ಇವರ ಸಾಮಾಜಿಕ ಸೇವಾ ಕಾರ್ಯವನ್ನು ಪ್ರಸಂಶಿಸಿದ ಆರೋಗ್ಯ ಇಲಾಖೆ, ಆರೋಗ್ಯ ಉಪಕೇಂದ್ರಕ್ಕೆ ದಾನಿಗಳ ಹೆಸರಿಡಲು ಅವಕಾಶವಿರುವುದರಿಂದ ಆರೋಗ್ಯ ಇಲಾಖೆ ಜಮೀನನ್ನು ದಾನವಾಗಿ ಪಡೆದು ಉಪಕೇಂದ್ರ ನಿರ್ಮಿಸಲು ಆದೇಶ ಹೊರಡಿಸಿದ್ದು, ಉಪ ಕೇಂದ್ರಕ್ಕೆ ಶ್ರೀಮತಿ ಜಯಮ್ಮ ಸಿದ್ದಪ್ಪ ಉಪ ಆರೋಗ್ಯಕೇಂದ್ರ ಎಂದು ಹೆಸರಿಡಲು ಸೂಚಿಸಿದೆ.
ಇದನ್ನೂ ಓದಿ:ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಈ ಬಾರಿಯೂ ಇಲ್ಲ ಸೈಕಲ್ ಭಾಗ್ಯ