ಚಾಮರಾಜನಗರ: ಟ್ರ್ಯಾಕ್ಟರ್ ಖರೀದಿಗಾಗಿ ಸಾಲ ಪಡೆಯಲು ಬ್ಯಾಂಕಿಗೆ ಅರ್ಜಿ ಸಲ್ಲಿಸಿದ ತಾಲೂಕಿನ ರೈತರೊಬ್ಬರಿಗೆ ಸಾಲ ಮಂಜೂರಾಗಿ 10 ವರ್ಷ ಕಳೆದರೂ ಸಾಲ ಮಂಜೂರಾತಿಯನ್ನೂ ತಿಳಿಸದೇ ಹಾಗೂ ಟ್ರ್ಯಾಕ್ಟರ್ ಸಹ ನೀಡದೆ ಶೋ ರೂಂ ಮಾಲೀಕರು ಸಾಲದ ಹಣ ಬಳಸಿಕೊಂಡು ವಂಚಿಸಿರುವ ಆರೋಪ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬ್ಯಾಂಕಿನಿಂದ ಒಟಿಎಸ್ ( ಒನ್ ಟೈಮ್ ಸೆಟಲ್‌ಮೆಂಟ್) ಮಾಡಿಕೊಳ್ಳುವಂತೆ ಬಂದ ನೋಟೀಸ್‌ನಿಂದ ಪ್ರಕರಣ ಬೆಳಕಿಗೆ ಬಂದಿದ್ದು, ರೈತನಿಗೆ ವಂಚಿಸಿರುವ ಚಾಮರಾಜನಗರ ನಂದಿ ಟ್ರ್ಯಾಕ್ಟರ್ ಶೋ ರೂಂ ಮಾಲೀಕರು ಹಾಗೂ ಗುಂಡ್ಲುಪೇಟೆಯ ಎಸ್‌ಬಿಐ (ಊಟಿ ರಸ್ತೆ ಶಾಖೆ) ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಏನಿದು ಘಟನೆ:ಗುಂಡ್ಲುಪೇಟೆ ತಾಲೂಕಿನ ಯರಿಯೂರು ಗ್ರಾಮದ ಮಲ್ಲಪ್ಪ ಟ್ರ್ಯಾಕ್ಟರ್ ಖರೀದಿಸುವ ಸಂಬಂಧ ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಶಾಖೆಗೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. 2010 ನ. 16ರಂದು ಸಾಲ ಮಂಜೂರು ಮಾಡಿದ್ದ ಬ್ಯಾಂಕ್ ಅಧಿಕಾರಿಗಳು ಅಂದೇ ಚಾಮರಾಜನಗರದ ನಂದಿ ಟ್ರ್ಯಾಕ್ಟರ್ ಶೋರೂಂ ಹೆಸರಿಗೆ 6.12 ಲಕ್ಷ ರೂ ಡಿಡಿಯನ್ನು ಸಹ ನೀಡಿದ್ದಾರೆ. ಆದರೆ, ಶೋರೂಂನವರು ಡಿಡಿ ಬಂದಿಲ್ಲ ಎಂದು ರೈತನಿಗೆ ಟ್ರ್ಯಾಕ್ಟರ್ ನೀಡದೇ ಸತಾಯಿಸಿದ್ದಾರೆ. ಇದರಿಂದ ಬೇಸತ್ತ ಮಲ್ಲಪ್ಪ ಇದರ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದಾರೆ. ನಂತರ ಸ್ವಲ್ಪ ದಿನಗಳಲ್ಲಿಯೇ ಮಲ್ಲಪ್ಪ ಮೃತಪಟ್ಟಿದ್ದರಿಂದ ಈ ಬಗ್ಗೆ ಮನೆಯವರು ಅತ್ತ ಗಮನಹರಿಸಲಿಲ್ಲ.
ಸಾಲ ಮತ್ತು ಬಡ್ಡಿಯ ಶೇ. 10 ಮೊತ್ತ ಕಟ್ಟಿಸಿಕೊಂಡು ಇತ್ತೀಚೆಗೆ ಬ್ಯಾಂಕ್‌ಗಳು ದೀರ್ಘಕಾಲದ ಸಾಲವನ್ನು ಮುಕ್ತಾಯಗೊಳಿಸಲು ಒಟಿಎಸ್ ಸೌಲಭ್ಯ ನೀಡುತ್ತಿವೆ. ಇದರ ಭಾಗವಾಗಿ ಮೃತ ರೈತ ಮಲ್ಲಪ್ಪ ಅವರ ಮಗ ಮಹೇಶ್ ಅವರಿಗೆ 1.60 ಲಕ್ಷ ರೂ ಕಟ್ಟಿದರೆ ನಿಮ್ಮ ಸಾಲವನ್ನು ಮುಕ್ತಾಯಗೊಳಿಸಲಾಗುವುದು ಎಂದು ಬ್ಯಾಂಕ್ ನೋಟಿಸ್ ಬಂದಿದೆ. ಇದನ್ನು ಕಂಡು ಅಚ್ಚರಿಗೊಂಡ ಮಹೇಶ್ ಅವರು, ರೈತ ಸಂಘಟನೆಯ ಮುಖಂಡರ ಜತೆಗೂಡಿ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ ಅಂದಿನ ಬ್ಯಾಂಕ್ ಅಧಿಕಾರಿಗಳು ಹಾಗೂ ಶೋರೂಂನವರು ಸೇರಿ ಮಾಡಿದ್ದ ಅವ್ಯವಹಾರ ಬಯಲಾಗಿದೆ.
ಬ್ಯಾಂಕ್ ಅಧಿಕಾರಿಗಳು ಹಾಗೂ ಶೋರೂಂನವರು ಸೇರಿ ರೈತರಿಗೆ ಅನ್ಯಾಯ ಎಸಗಿದ್ದಾರೆ. ಈ ಕುರಿತು ಸಂತ್ರಸ್ತ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲದಿದ್ದರೆ ಬ್ಯಾಂಕ್ ಅಧಿಕಾರಿಗಳು ಹಾಗೂ ಶೋ ರೂಂ ಮಾಲೀಕರು ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗುವುದು ಎಂದು ರೈತ ಹೋರಾಟಗಾರರು ಎಚ್ಚರಿಸಿದ್ದು, ಇದುವರೆಗೆ ಗುಂಡ್ಲುಪೇಟೆ ಠಾಣೆಯಲ್ಲಿ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.