ಟೊಮೊಟೊ ಬಾತ್ ಸೇವಿಸಿ ಮೊರಾರ್ಜಿ ಶಾಲೆಯ 7 ವಿದ್ಯಾರ್ಥಿಗಳು ಅಸ್ವಸ್ಥ ಚಾಮರಾಜನಗರ: ಮೊರಾರ್ಜಿ ವಸತಿ ಶಾಲೆಗಳ ಅವ್ಯವಸ್ಥೆ ಮತ್ತೇ ಬಟಾಬಯಲಾಗಿದ್ದು, ಟೊಮೆಟೊ ಬಾತ್ ಸೇವಿಸಿ 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಧ ಘಟನೆ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಇಂದು ಬೆಳಗಿನ ಉಪಹಾರ ಟೊಮೆಟೊ ಬಾತ್ ಅನ್ನು ಸೇವಿಸಿದ್ದ ವರ್ಣಿತ (13), ಹರ್ಷಿತಾ (13), ಪ್ರಿಯ (13), ರಚನಾ (15), ಸಂಜನಾ (15), ಸಂಗೀತ (13), ಪ್ರಜ್ವಲ್ (15) ಎಂಬ ಏಳು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ಉರಿ, ವಾಂತಿ ಕಾಣಿಸಿಕೊಂಡಿದೆ.
ಅಸ್ವಸ್ಥತರನ್ನು ಕೂಡಲೇ ಸಮೀಪದ ಹೊರೆಯಾಲ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ ಪ್ರಜ್ವಲ್ ಎಂಬ ವಿದ್ಯಾರ್ಥಿಗೆ ಹೊಟ್ಟೆ ನೋವು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆ ಆತನನ್ನು ಬೇಗೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮರುಕಳಿಸಿದ ಅಸ್ವಸ್ಥ ಪ್ರಕರಣ: ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ತಾಲೂಕಿನ ಯಡನವಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಚಿಕನ್ ತಿಂದು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಈಗ ಅದೇ ಯಡವನಹಳ್ಳಿ ಕ್ಯಾಂಪಸ್ನಲ್ಲಿರುವ ಗರಗನಹಳ್ಳಿ ಶಾಲೆಯಲ್ಲಿ ಈಗ 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು ಮೊರಾರ್ಜಿ ಶಾಲೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಹೊರೆಯಾಲ ಆಸ್ಪತ್ರೆ ವೈದ್ಯ ಡಾ.ದೀಪಕ್ ಅಸ್ವಸ್ಥ ವಿದ್ಯಾರ್ಥಿಗಳಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್ ಹಾಗೂ ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಘಟನೆಯಲ್ಲಿ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲಾಖೆ ಉಪ ನಿರ್ದೇಶಕ ಭೇಟಿ: ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಮಕ್ಕಳು ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಮಾಹಿತಿ ಅರಿತ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿದರು. ನಂತರ ವಸತಿ ಶಾಲೆಗೂ ತೆರಳಿ ವಿದ್ಯಾರ್ಥಿಗಳಿಂದ ಘಟನೆ ವಿವರ ಪಡೆದಿದ್ದಾರೆ. ಈ ವೇಳೆ ಪ್ರಾಂಶುಪಾಲ ಲೋಕೇಶ್ ಹಾಗೂ ಅಡುಗೆ ಸಿಬ್ಬಂದಿಯನ್ನು ಉಪ ನಿರ್ದೇಶಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ತಿಂಡಿಯಲ್ಲಿ ಹೆಚ್ಚಿನ ಖಾರ ಇದ್ದ ಕಾರಣದಿಂದ ಮಕ್ಕಳಿಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ನಂತರ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಚಾಮರಾಜನಗರ: ಚಿಕನ್ ಊಟ ತಿಂದು 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು