ಚಾಮರಾಜನಗರ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮದ ಮುಖಂಡರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಲಾದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ. ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಗ್ರಾಮದ ಹಿರಿಯರು 3 ಲಕ್ಷ ರೂ. ದಂಡ ಹಾಕಿ, ಗ್ರಾಮದಿಂದ ಹೊರಗುಳಿಯುವಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಕೊಳ್ಳೇಗಾಲ ಡಿ.ವೈ.ಎಸ್.ಪಿ ಕಚೇರಿಗೆ ದಂಪತಿ ದೂರು ನೀಡಿದ್ದಾರೆ.
ಕುಣಗಳ್ಳಿ ಗ್ರಾಮದ ಗೋವಿಂದರಾಜು ಎಂಬುವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಜನಾಂಗಕ್ಕೆ ಸೇರಿದ ಪ್ರಕಾಶ್ ಎಂಬುವರ ಮಗಳಾದ ಶ್ವೇತಾಳನ್ನು ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಕಳೆದ 5 ವರ್ಷಗಳ ಹಿಂದೆ ಮಳವಳ್ಳಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಗೋವಿಂದರಾಜು ಮಳವಳ್ಳಿಯಲ್ಲಿ ಮನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ 2 ರಿಂದ 3 ಬಾರಿ ಕುಣಗಳ್ಳಿ ಗ್ರಾಮಕ್ಕೆ ದಂಪತಿ ಬಂದು ಹೋಗುತ್ತಿದ್ದರು. ಗೋವಿಂದ ಅವರ ಮನೆಯಲ್ಲಿ ಅಂತರ್‌ಜಾತಿ ವಿವಾಹ ಎಂದು ತಿಳಿದಿದ್ದರೂ ಸಹ ಯಾರೂ ತೊಂದರೆ ನೀಡಿಲ್ಲ.
ಆದ್ರೆ, ಅಕ್ಕಪಕ್ಕದ ನಿವಾಸಿಗಳು ಅಂತರ್‌ಜಾತಿ ವಿವಾಹದ ಬಗ್ಗೆ ಮಾಹಿತಿ ಪಡೆದು ಶ್ವೇತಾ ನಮ್ಮ ಜಾತಿಯವಳಲ್ಲ, ಅವಳು ದಲಿತ ಜನಾಂಗಕ್ಕೆ ಸೇರಿದವಳು ಎಂದು ನಿಂದಿಸಿದ್ದಾರೆ. ಪಕ್ಕದ ಮನೆಯ ಕೆಲವರು ಗ್ರಾಮದ ಯಜಮಾನರುಗಳಿಗೆ ಮಾಹಿತಿ ನೀಡಿ, ಎರಡರಿಂದ ಮೂರು ಬಾರಿ ಪಂಚಾಯಿತಿ ನಡೆಸಿ, ದಂಡ ಕಟ್ಟಬೇಕು ಎಂದು ನಮ್ಮ ಮಾವ ವೆಂಕಟಶೆಟ್ಟಿ ಮತ್ತು ಸಂಗಮ್ಮರಿಗೆ ಸೂಚಿಸಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.