ಚಾಮರಾಜನಗರ: ಆನೆ ದಾಳಿಗೊಳಗಾಗಿದ್ದ ರೈತನನ್ನು ಜೋಲಿಯಲ್ಲಿ ಹೊತ್ತು 10 ಕಿಮೀ ದೂರದ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಇಲ್ಲದೇ ನರಕಯಾತನೆ ಅನುಭವಿಸಿದ ಘಟನೆ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕುಗ್ರಾಮ ದೊಡ್ಡಾನೆಯಲ್ಲಿ ನಡೆದಿದೆ.
ದೊಡ್ಡಾನೆ ಗ್ರಾಮದ ಬೆಳ್ಳಿ ಎಂಬಾತ ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ಮಾಡಿದೆ. ಆನೆಯಿಂದ ಹೇಗೋ ತಪ್ಪಿಸಿಕೊಂಡು ಹಳ್ಳದಲ್ಲಿ ನರಳಾಡುತ್ತ ಬಿದ್ದಿದ್ದ ರೈತನನ್ನು ಕಂಡ ಗ್ರಾಮಸ್ಥರು ಜೋಲಿ ಕಟ್ಟಿಕೊಂಡು 10 ಕಿಮೀ ದೂರದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊತ್ತು ತಂದಿದ್ದಾರೆ.
ಆನೆ ದಾಳಿಗೊಳಗಾದ ರೈತನನ್ನು ಚಿಕಿತ್ಸೆಗಾಗಿ ಜೋಲಿಯಲ್ಲಿ ಹೊತ್ತು ತರುತ್ತಿರುವ ಗ್ರಾಮಸ್ಥರು. ಆದರೆ, ಸುಳ್ವಾಡಿಯಲ್ಲಿ ವೈದ್ಯರು ಸಿಗದಿದ್ದರಿಂದ ಕೊಳ್ಳೇಗಾಲಕ್ಕೆ ಕರೆತರು ಗ್ರಾಮಸ್ಥರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ವಾಡಿ ವಿಷ ಪ್ರಸಾದ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾರ್ಟಳ್ಳಿಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುದೆಂದು ನೀಡಿದ್ದ ಭರವಸೆ ಹಾಗೆಯೇ ಉಳಿದಿದೆ.
ಇನ್ನು, ಗಾಯಾಳುವಿಗೆ ಚಿಕಿತ್ಸಾ ವೆಚ್ಚ ಭರಿಸಿ, ಪರಿಹಾರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದೆ.