ಬೆಂಗಳೂರು: ರಾಜ್ಯ ಸರ್ಕಾರ ಜಿಂದಾಲ್ಗೆ ಭೂಮಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಜುಲೈ 6 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ತುಂಗಭದ್ರಾ ಡ್ಯಾಂ ಸೇತುವೆಯ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿ ವಿರುದ್ಧ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದೆ. ಸರ್ಕಾರ ರಚಿಸಿರುವ ಸಮಿತಿಯಲ್ಲಿ ಯಾವುದೇ ಅರ್ಥವಿಲ್ಲ. 1995 ರಿಂದ ಇಲ್ಲಿಯವರೆಗೂ 11,400 ಎಕರೆ ಪ್ರದೇಶವನ್ನು ಜಿಂದಾಲ್ಗೆ ಬಿಟ್ಟುಕೊಟ್ಟಿದೆ. ಬಳ್ಳಾರಿ ಜಿಲ್ಲೆ ಇದೀಗ ಜಿಂದಾಲ್ ಕಂಪನಿಯ ಹತೋಟಿಯಲ್ಲಿದೆ. ಹೀಗಿರುವಾಗ ಮತ್ತಷ್ಟು ಜಮೀನನ್ನು ಜಿಂದಾಲ್ಗೆ ನೀಡದಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಮೈಸೂರು ರಾಜ್ಯಕ್ಕೆ ಸೇರಿದ ಬಳ್ಳಾರಿ ಜಿಲ್ಲೆ ಹಾಗೂ ಜಿಂದಾಲ್ ಕಂಪನಿಯ ಸಮಗ್ರ ವಿವರವನ್ನು ಸುಪ್ರೀಂ ಕೋರ್ಟಿಗೆ ನೀಡಬೇಕು. ನಂತರ ಇದಕ್ಕೆ ಸಂಬಂಧಿಸಿದ ಇಲ್ಲ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಸರ್ಕಾರದ ಜಮೀನನ್ನು ಜಿಂದಾಲ್ಗೆ ನೀಡುತ್ತಿರುವುದು ಸರಿಯಲ್ಲ, ಇದಕ್ಕೆ ಸರ್ಕಾರದ ಕೆಲ ಮಂತ್ರಿಗಳು ಬೆಂಬಲವಾಗಿ ನಿಂತಿದ್ದಾರೆ. ಮತ್ತೊಂದೆಡೆ ವಿರೋಧ ಪಕ್ಷದಿಂದ ವಿರೋಧ ವ್ಯಕ್ತವಾಗಿದೆ. ಆದರೂ ಸರ್ಕಾರ ರಚಿಸಿರುವ ಸಮಿತಿಯು ಕುರಿಗಳನ್ನು ಕಾಯಲು ತೋಳ ಬಿಟ್ಟಂತಾಗಿದೆ ಎಂದು ಹೇಳಿದರು.
ಸರ್ಕಾರದ ಕ್ರಮ ಖಂಡಿಸಿ ಜುಲೈ 6 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಜುಲೈ 15 ರಂದು ತೋರಣಗಲ್ ಬಳಿ ಗಡಿನಾಡು ಕನ್ನಡಿಗರ ಸಮ್ಮೇಳನ ನಡೆಸುವ ಮೂಲಕ ಬಳ್ಳಾರಿ ಬಂದ್ಗೆ ಕರೆ ನೀಡುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.