ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷೀಪ್ರಗತಿಯ ರಾಜಕೀಯ ವಿದ್ಯಮಾನಗಳು ಕಾಂಗ್ರೆಸ್ ಹಾಗೂ ಜೆಡಿಎಸ್ನ 13 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ತೂಗುಕತ್ತಿ ನೇತಾಡುವಂತೆ ಮಾಡುತ್ತಿದೆ. ಇದು ಹೀಗೊಂದು ಲೆಕ್ಕಾಚಾರವಷ್ಟೇ. ಹೀಗೆ ಆಗುತ್ತೆ ಅಂತಾ ಹೇಳಲು ಸಾಧ್ಯವೇ ಇಲ್ಲ.
ವಿರೋಧ ಪಕ್ಷದ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ. ಸರ್ಕಾರ ರಚಿಸುವ ಕೆಲಸಕ್ಕೆ ಕೈಹಾಕುತ್ತಾರಾ? ಇಲ್ಲವೇ ರಾಜ್ಯದಲ್ಲಿ ವಿಪರೀತ ಪರಿಸ್ಥಿತಿ ಉದ್ಭವಿಸಿರುವುದರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುತ್ತಾ? ಪ್ರಸ್ತುತ ರಾಜ್ಯ ಸರ್ಕಾರದ ಭವಿಷ್ಯದ ಚೆಂಡು ಸದ್ಯ ರಾಜಭವನ ಅಂಗಳದಲ್ಲಿದೆ. ರಾಜ್ಯಪಾಲರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇಬ್ಬರು ಶಾಸಕರು ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿದ್ದು, ಸದನದ ಒಟ್ಟು ಸದಸ್ಯರ 224ರಿಂದ 222ಕ್ಕೆ ಇಳಿದಿದೆ. ಅವರಲ್ಲಿ ಬಿಜೆಪಿ ಬಳಿ 105 ಶಾಸಕರಿದ್ದಾರೆ. ಇಂದು 11 ಶಾಸಕರ ಜೊತೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದು, ಬಿಜೆಪಿ ಸರ್ಕಾರ ರಚಿಸಲು ಸುಲಭವಾಗಲಿದೆ. ಬಿಜೆಪಿ ಬಹುಮತ ಸಾಬೀತಿಗೆ ಆಗ್ರಹಿಸಿ ಮೈತ್ರಿ ಪಕ್ಷಗಳ ಒಂದಿಷ್ಟು ಶಾಸಕರನ್ನು ಸದನದಲ್ಲಿ ಗೈರು ಆಗುವಂತೆ ತಂತ್ರ ರೂಪಿಸಿದರೇ ಸರ್ಕಾರ ಅಲ್ಪ ಮೊತ್ತಕ್ಕೆ ಕುಸಿಯುತ್ತದೆ. ಆಗ ಬಿಜೆಪಿ ಅಧಿಕಾರದ ಹಾದಿ ಸುಗಮವಾಗುತ್ತದೆ. ಒಂದು ವೇಳೆ ಬಹುಮತ ಸಾಬೀತಿಗೆ ವಿಫಲವಾದರೇ ಮುಂದಿನ ನಿರ್ಧಾರ ರಾಜ್ಯಪಾಲರ ಮೇಲೆ ಬಿಟ್ಟದ್ದು.
ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡ್ತಾರಾ ರಾಜ್ಯಪಾಲರು?
ರಾಜ್ಯಪಾಲರು ಮೈತ್ರಿಕೂಟಗಳಲ್ಲಿ ಬಿರುಕು ಉಂಟಾಗಿದೆ. ರಾಜಕೀಯ ಅಸ್ಥಿರತೆ ಉದ್ಭವಿಸಿದೆ ಎಂಬ ನೆಪ ಹೇಳಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರಕ್ಕೆ ಶಿಫಾರಸು ಮಾಡಬಹುದು. ಸ್ಪೀಕರ್ ಇವರ ರಾಜೀನಾಮೆ ವಿಳಂಬ ಮಾಡಿದರೆ, ರಾಜಕೀಯ ಬಿಕ್ಕಟ್ಟು ಉದ್ಬವಿಸಲಿದೆ. ಆಗ ರಾಜ್ಯಪಾಲರು ಕೇಂದ್ರಕ್ಕೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಆಗ ರಾಜ್ಯಪಾಲರ ಶಿಫಾರಸನ್ನು ಅನುಸರಿಸಿ ಕೇಂದ್ರ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡು ಬಳಿಕ ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದು ರಾಷ್ಟ್ರಪತಿ ಆಳ್ವಿಕೆ ಹೇರಬಹುದು.
ರಾಷ್ಟ್ರಪತಿ ಆಳ್ವಿಕೆಯ ಹಿಂದಿರುವ ಸಂವಿಧಾನಿಕ ನಡೆಗಳು
*ಯಾವುದೇ ಒಂದು ರಾಜ್ಯದ ಸಂವಿಧಾನಿಕ ವ್ಯವಸ್ಥೆ ಕೆಲಸ ಮಾಡಲು ವಿಫಲವಾದರೆ, ಆಗ ರಾಜ್ಯವು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಬರುತ್ತದೆ. ಇಲ್ಲಿ ಆಡಳಿತ ನಿರ್ವಹಣೆಯ ಹೊಣೆ ರಾಜ್ಯಪಾಲರದು. ಸಂವಿಧಾನದ 356ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆ ಜಾರಿ ಆಗುತ್ತದೆ.