ಕರ್ನಾಟಕ

karnataka

By

Published : Feb 11, 2019, 5:06 PM IST

Updated : Feb 11, 2019, 5:22 PM IST

ETV Bharat / state

ವಿಧಾನಮಂಡಲದಲ್ಲಿ ಧ್ವನಿಸುರಳಿ ಸುತ್ತ ಚರ್ಚೆ ಹೇಗಿತ್ತು.. ಸ್ಪೀಕರ್​ ಕೈಗೊಂಡ ನಿರ್ಧಾರ ಏನು?

ರಮೇಶ್​ ಕುಮಾರ್​ಗೆ 50 ಕೋಟಿ ರೂ. ಲಂಚ ಆರೋಪದ ಧ್ವನಿ ಸುರಳಿ... ಎಸ್​​ಐಟಿ ತನಿಖೆಗೆ ಸ್ಪೀಕರ್ ಸಲಹೆ. ಸದನದಲ್ಲಿ ಪ್ರತಿಧ್ವನಿಸಿದ ಆಪರೇಷನ್ ಆಡಿಯೋ. ಬಿಜೆಪಿ, ಕಾಂಗ್ರೆಸ್ ಸದಸ್ಯರು ಮಧ್ಯೆ ಜಟಾಪಟಿ.

ಸದನ ಚಿತ್ರ

ಬೆಂಗಳೂರು: ಸಭಾಧ್ಯಕ್ಷ ರಮೇಶ್​ ಕುಮಾರ್​ ವಿರುದ್ಧ ಕೇಳಿ ಬಂದಿರುವ ಧ್ವನಿಸುರಳಿಯ ಬಗ್ಗೆ ಇಂದು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಈ ಬಗ್ಗೆ ಎಲ್ಲ ಪಕ್ಷದ ನಾಯಕರು ಮಾತನಾಡಿದರು. ಸ್ಪೀಕರ್​ ವಿರುದ್ಧವೇ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರಿಗೂ ಮಾತನಾಡಲು ಅವಕಾಶ ಕೋರಿದರು. ಅಷ್ಟೇ ಅಲ್ಲ ಎಲ್ಲ ಸದಸ್ಯರ ಒಪಿನಿಯನ್​ ಪಡೆದ ಸಭಾಧ್ಯಕ್ಷ ರಮೇಶ್​ ಕುಮಾರ್​ ಎಸ್​ಐಟಿ ತನಿಖೆಗೆ ಸಿಎಂಗೆ ಸಲಹೆ ನೀಡಿದರು. ತಮ್ಮ ಮೇಲೆಯೇ ಆರೋಪ ಇರುವುದರಿಂದ ನಾನೇ ಇಂತಹುದ್ದೇ ತನಿಖೆ ನಡೆಯಬೇಕು ಎಂಬ ಆದೇಶ ನೀಡುವ ಅಧಿಕಾರ ಇಲ್ಲ. ಹೀಗಾಗಿ ನಾವು ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದರು. ಆದರೆ ಸರ್ಕಾರದಿಂದ ನಡೆಯುವ ಯಾವುದೇ ತನಿಖೆಗೆ ಒಪ್ಪುವುದಿಲ್ಲ ಈ ಬಗ್ಗೆ ಸ್ಪೀಕರ್​ ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ಪಟ್ಟು ಹಿಡಿದೆ.

ಸದನದಲ್ಲಿ ಏನೇನು ನಡೆಯಿತು?: ಎರಡು ದಿನಗಳ ಬಿಡುವಿನ ಬಳಿಕ ವಿಧಾನಸಭೆ ಕಲಾಪ ಆರಂಭವಾಯಿತು. ಸದನ ಆರಂಭವಾಗುತ್ತಿದ್ದಂತೆ ರಮೇಶ್​ ಕುಮಾರ್​ ತಮ್ಮ ಮೇಲೆಯೇ ಬಂದ ಆರೋಪದ ಹಿನ್ನೆಲೆಯಲ್ಲಿ, ಈ ಬಗ್ಗೆ ಮಾತನಾಡಿರುವವರು ಯಾರು ಅಂತಾ ಗೊತ್ತಾಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು. ಇಂತಹ ಆರೋಪ ಬಂದಿದ್ದರಿಂದ ನಾನು ತುಂಬಾ ನೊಂದಿದ್ದೇನೆ. ಇದರಿಂದ ನಾನು ನನ್ನ ಕುಟುಂಬಕ್ಕೆ ಏನು ಹೇಳಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು. ಆ ಬಳಿಕ ಈ ಬಗ್ಗೆ ದೂರು ನೀಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇದು ಸದನಕ್ಕಾದ ಅವಮಾನ ಎಂದು ಹಕ್ಕು ಚ್ಯುತಿಯಾಗಿದೆ ಎಂದು ಪ್ರತಿಪಾದಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಪ್ರತಿಪಕ್ಷದ ಪರವಾಗಿ ಮಾತನಾಡಿದ ಶಾಸಕ ಮಾಧುಸ್ವಾಮಿ, ಯಾರೋ ಮೂರನೇ ವ್ಯಕ್ತಿ ಈ ಬಗ್ಗೆ ಮಾತನಾಡಿರುವುದರಿಂದ ಸದನದ ಹಕ್ಕು ಚ್ಯುತಿ ವ್ಯಾಪ್ತಿಗೆ ಬರಲ್ಲ ಎಂದು ಪ್ರತಿಪಾದಿಸಿದರು. ಆದ್ರೆ ಇದನ್ನ ಇಷ್ಟಕ್ಕೆ ಕೈ ಬಿಡಲು ಸಾಧ್ಯವೇ ಇಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದರು.

ಇನ್ನು ಸ್ಪೀಕರ್​ ಪರ ಮಾತನಾಡಿದ ಕಾಂಗ್ರೆಸ್​ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಅಷ್ಟೇ ಅಲ್ಲ ರಮೇಶ್​ ಕುಮಾರ್​ ಅವರನ್ನ ನಾನು ತೀರಾ ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರ ಮೇಲೆ ಬಂದ ಆರೋಪದಿಂದ ನನಗೂ ಸಹ ನೋವಾಗಿದೆ ಎಂದರು. ಇದು ಕೇವಲ ಭಾವನಾತ್ಮಕ ಮಾತುಕತೆಯಲ್ಲ. ಸತ್ಯಾಂಶ ಎಲ್ಲರಿಗೂ ಗೊತ್ತಾಗಬೇಕು. ಶಾಸಕರ ರಾಜೀನಾಮೆ ಒಪ್ಪಿಕೊಳ್ಳಲು 50 ಕೋಟಿ ರೂ. ನೀಡಲಾಗಿದೆ ಎಂಬ ಅಂಶ ಧ್ವನಿಸುರುಳಿಯಲ್ಲೂ ಸ್ಪಷ್ಟವಾಗಿದೆ ಎಂದರು.

ಉಪ್ಪು ತಿಂದವರು ನೀರು ಕುಡಿಯಬೇಕು: ಬಿಜೆಪಿ ಹಿರಿಯ ಶಾಸಕ ಸುರೇಶ್‍ಕುಮಾರ್ ಮಾತನಾಡಿ, ಇಡೀ ಸದನ ಸಭಾಧ್ಯಕ್ಷರ ಮೇಲೆ ವಿಶ್ವಾಸವಿಟ್ಟಿದೆ. ಸಭಾಧ್ಯಕ್ಷರ ಮೇಲೆ ಲವಲೇಷವೂ ಇಲ್ಲ. ತುಂಬ ವ್ಯಕ್ತಿಗತ ತೀರ್ಮಾನ ಬೇಡ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸಭಾಧ್ಯಕ್ಷ ಸ್ಥಾಕ್ಕೆ ಅವಮಾನ ಮಾಡಿದವರು ಯಾರು? ಯಾಕೆ ಮಾತನಾಡಿದವರು ಪತ್ತೆಹಚ್ಚಬೇಕು. ಇದಕ್ಕಾಗಿ ಸದನ ನೊಮ್ಮೊಂದಿಗಿರುತ್ತದೆ ಎಂದರು. ಇನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಸ್ಪೀಕರ್​ ಯಾವುದೇ ಕಾರಣಕ್ಕೂ ಭಾವನಾತ್ಮಕ ತೀರ್ಮಾನ ಕೈಗೊಳ್ಳುವುದು ಬೇಡ ಎಂದು ಮನವಿ ಮಾಡಿದರು. ಸೂಕ್ತ ತನಿಖೆ ನಡೆಸಬೇಕು ಹಾಗೂ ಶಾಸಕರ ಮಾನ ಹರಾಜಾಗುತ್ತಿರುವುದನ್ನ ತಡೆಯಬೇಕು ಎಂದು ಒತ್ತಾಯಿಸಿದರು. ಆಡಿಯೋ ನಕಲಿಯೋ ಅಸಲಿಯೋ: ಈಶ್ವರಪ್ಪ ಬಿಜೆಪಿಯ ಹಿರಿಯ ಶಾಸಕ ಕೆ.ಎಸ್​. ಈಶ್ವರಪ್ಪ ಮಾತನಾಡಿ, ಸಭಾಧ್ಯಕ್ಷರ ಮೇಲೆಯೇ ಆರೋಪ ಬಂದಿದ್ದು ಸರಿಯಲ್ಲ. ಇನ್ನು ಧ್ವನಿಸುರುಳಿ ಸತ್ಯಾಸತ್ಯತೆಯೂ ಬಯಲಾಗಬೇಕು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Last Updated : Feb 11, 2019, 5:22 PM IST

For All Latest Updates

ABOUT THE AUTHOR

...view details