ಬೀದರ್:ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಜಾತಿ ಹಾಗೂ ಸ್ಥಳೀಯತೆ ಕುರಿತು 2017ರಲ್ಲೇ ಇತ್ಯರ್ಥವಾದ ಪ್ರಕರಣವೊಂದರ ಸಂಬಂಧ ಜಿಲ್ಲಾಧಿಕಾರಿಯಾಗಿದ್ದ ಡಾ. ಎಚ್ ಆರ್ ಮಹದೇವ್ ನೋಟಿಸ್ ನೀಡಿದ್ದು, ಈ ನೋಟಿಸ್ ಪ್ರಭು ಚೌಹಾಣ್ ಅವರ ಕೈಗೆ ಸೇರಿಲ್ಲ. ಅಂಥದ್ದೊಂದು ನೋಟಿಸ್ ಇದೆಯಾ ಅಂತಲೂ ಗೊತ್ತಿಲ್ಲ. ಈ ನಡುವೆ ಕಾಂಗ್ರೆಸ್ನ ವಿಜಯಕುಮಾರ ಕವಡ್ಯಾಳ ಹಾಗೂ ಮೀನಾಕ್ಷಿ ಸಂಗ್ರಾಮ್ ಸಚಿವರ ತೇಜೋವಧೆ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಪ್ರತಿಕ್ರಿಯಿಸಿದ್ದಾರೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಭು ಚೌಹಾಣ್ ಏಳ್ಗೆ ಸಹಿಸದೆ ಕಾಂಗ್ರೆಸ್ ಮುಖಂಡರು ಅರ್ಥಹೀನ ವಿಷಯವನ್ನಿಟ್ಟುಕೊಂಡು ಕೆಸರೆರೆಚುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.