ಕರ್ನಾಟಕ

karnataka

ಸಹೋದರನ ಸಾವಿನ ದುಃಖದಲ್ಲಿಯೇ SSLC ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಹೋದರಿ

By

Published : Apr 7, 2023, 10:38 AM IST

ಸಹೋದರನ ಸಾವಿನ ನಡುವೆಯೂ ವಿದ್ಯಾರ್ಥಿನಿ ಪರೀಕ್ಷೆ ಬರೆದಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

Bidar
ಕೀರ್ತನಾ ಪ್ರಶಾಂತ್

ಬೀದರ್:ತಮ್ಮನ ಸಾವಿನ ದುಃಖದಲ್ಲಿಯೇ ಎಸ್​​ಎಸ್​​ಎಲ್​​ಸಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ಘಟನೆ ತಾಳಮಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಪರೀಕ್ಷೆ ಕೇಂದ್ರದಲ್ಲಿ ನಡೆದಿದೆ. ಗ್ರಾಮದ ಕೀರ್ತನಾ ಪ್ರಶಾಂತ್ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ.

ಘಟನೆಯ ವಿವರ: ವೇಳಾ ಪಟ್ಟಿಯಂತೆ ನಿನ್ನೆ (ಗುರುವಾರ) ಇಂಗ್ಲಿಷ್​ ಭಾಷೆ ವಿಷಯ ಇತ್ತು. ವಿದ್ಯಾರ್ಥಿನಿ ಕೀರ್ತನಾ ಎಂಬುವವರ ಸಹೋದರ ಕಾರ್ತಿಕ ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ. ಗುರುವಾರ ಆತನ ಅಂತ್ಯ ಕ್ರಿಯೆ ನಡೆಯಲ್ಲಿತ್ತು. ಹೀಗಾಗಿ ತಮ್ಮನ ಸಾವಿನ ದುಃಖದಲ್ಲಿದ್ದ ಬಾಲಕಿ ಪರೀಕ್ಷೆ ಬರೆಯಲು ನಿರಾಕರಿಸಿದ್ದರು. ಈ ಬಗ್ಗೆ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಸುರೇಶ ಕಟ್ಟಮನಿ, ಕಸ್ಟೋಡಿಯನ್ ಮಲ್ಲಪ್ಪ ಜಿಗಜೀವಣಿ ಅವರು ಬಾಲಕಿಯ ತಂದೆ ಸೇರಿದಂತೆ ಸಂಬಂಧಿಕರಿಗೆ ಪರೀಕ್ಷೆ ಬರೆಸುವ ಬಗ್ಗೆ ಮನವರಿಕೆ ಮಾಡಿದರು. ಇದರ ಫಲವಾಗಿ ದುಃಖದ ಮಧ್ಯೆ ಬಾಲಕಿ ಕೀರ್ತನಾ ಇಂಗ್ಲಿಷ್​ ಪರೀಕ್ಷೆ ಬರೆದಿದ್ದಾರೆ. ಬಳಿಕ ತಮ್ಮನ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ:ಎಸ್​ಎಸ್​ಎಲ್​ಸಿ ಪರೀಕ್ಷೆ; ಬೀದರ್​ನಲ್ಲಿ ಸಾಮೂಹಿಕ ನಕಲು, 15 ಶಿಕ್ಷಕರ ಅಮಾನತು

ತಂದೆ ಸಾವಿನ ನೋವಿನ ಮಧ್ಯೆ ಪರೀಕ್ಷೆ ಬರೆದ ವಿದ್ಯಾರ್ಥಿನಿ: ತಂದೆಯ ಸಾವಿನ ದುಃಖದ ನಡುವೆಯೂ ಶಾಲಾ ವಿದ್ಯಾರ್ಥಿನಿಯೊಬ್ಬರು ಹತ್ತನೇ ತರಗತಿ ಪರೀಕ್ಷೆ ಬರೆದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಏ.1ರಂದು ನಡೆದಿತ್ತು. ಹುಕ್ಕೇರಿ ತಾಲೂಕಿನ ಕೆಸ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯಾದ ಮಿದ್ದತ್ ಅಬ್ದುಲ್ ರಜಾಕ್ ಸನದಿ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಕಳೆದ ಗುರುವಾರ ರಾತ್ರಿ ವಿದ್ಯಾರ್ಥಿನಿ ಮಿದ್ದತ್​​ ಅವರ ತಂದೆ ಮೃತಪಟ್ಟಿದ್ದರು.

ಈ ಹಿನ್ನೆಲೆ ಮರುದಿನ ನಡೆಯಬೇಕಿದ್ದ ಪರೀಕ್ಷೆಗೆ ವಿದ್ಯಾರ್ಥಿನಿ ಗೈರು ಹಾಜರಾಗಿದ್ದರು. ಈ ಬಗ್ಗೆ ತಿಳಿದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿ ಮೋಹನ್​ ದಂಡಿನ ಅವರ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ಮುಖ್ಯೋಪಾಧ್ಯಾಯರಿಗೆ ಮತ್ತು ಕೆಲ ಶಿಕ್ಷಕರಿಗೆ ವಿದ್ಯಾರ್ಥಿನಿಯ ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿನಿಯ ಮನೆಗೆ ತೆರಳಿದ ಶಿಕ್ಷಕರು, ವಿದ್ಯಾರ್ಥಿನಿಯ ಮನವೊಲಿಸಿ, ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಕೋರಿದ್ದರು. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ವರೆಗೆ ವಾಹನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.

ಇದನ್ನೂ ಓದಿ:ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶೇ. 10 ಕೃಪಾಂಕ ಮುಂದುವರಿಕೆಗೆ ನಿರ್ಧಾರ

ಮಾ.​ 31ರ ಶುಕ್ರವಾರದಂದು ರಾಜ್ಯಾದ್ಯಂತ ಹತ್ತನೇ ತರಗತಿ ಪರೀಕ್ಷೆಗಳು ಆರಂಭಗೊಂಡಿವೆ. ಶುಕ್ರವಾರ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ರಾಜ್ಯಾದ್ಯಂತ ಶೇ. 98.48ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇನ್ನು, ಎಸ್ಎಸ್​ಎಲ್​ಸಿ ಪರೀಕ್ಷೆ ವೇಳೆ ಯಾವುದೇ ರೀತಿಯ ಅಕ್ರಮಗಳು ವರದಿ ಆಗಿಲ್ಲ ಎಂದು ತಿಳಿದು ಬಂದಿದೆ

ಇದನ್ನೂ ಓದಿ:ಪರೀಕ್ಷೆ ಹಿಂದಿನ ದಿನ ತಂದೆ ಸಾವು: ನೋವಿನ ಮಧ್ಯೆಯೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ABOUT THE AUTHOR

...view details