ಬಸವಕಲ್ಯಾಣ :ಬೈಕ್ಗೆ ಕಾರು ಡಿಕ್ಕಿಯಾಗಿ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಸ್ತಾಪೂರ ಬಂಗ್ಲಾದ ಸಮೀಪ ಜರುಗಿದೆ.
ತಾಲೂಕಿನ ತಳಗೋಗ ಗ್ರಾಮದ ಗೋವಿಂದ ಸಸಾನೆ(30) ಹಾಗೂ ಈತನ ಸಹೋದರಿಯಾಗಿರುವ ಸಸ್ತಾಪೂರ ಗ್ರಾಮದ ಕಲಾವತಿ ವಿಜಯಕುಮಾರ್ (40) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು. ಮಹಾರಾಷ್ಟ್ರದ ಭಾಟಸಂಗಾವಿಯ ಮಂಜುಳಾ ಸಂಜು ಪಾಟೋಳೆ ಗಾಯಗೊಂಡ ಮಹಿಳೆಯಾಗಿದ್ದಾಳೆ.
ರಸ್ತೆ ಅಪಘಾತದಲ್ಲಿ ಅಕ್ಕ-ತಮ್ಮ ಸ್ಥಳದಲ್ಲೇ ಸಾವು.. ಅನಾರೋಗ್ಯದಿಂದ ಬಳಲುತ್ತಿರುವ ತಾಲೂಕಿನ ತಳಬೋಗ ಗ್ರಾಮದಲ್ಲಿಯ ತನ್ನ ಅಜ್ಜಿಯ ಆರೋಗ್ಯ ವಿಚಾರಿಸಲೆಂದು ಸಹೋದರಿಯರು ಬಂದಿದ್ದರು. ಅವರನ್ನು ಕಿರಿಯ ಸಹೋದರನಾಗಿರುವ ಗೋವಿಂದ ಸಸಾನೆ ಬೈಕ್ನಲ್ಲಿ ಸಸ್ತಾಪೂರ ಗ್ರಾಮಕ್ಕೆ ಬಿಟ್ಟು ಬರಲು ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಬಂಗ್ಲಾ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಂಜುಳಾ ಎನ್ನುವ ಮಹಿಳೆಗೆ ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉಮ್ಮರ್ಗಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಸಿಪಿಐ ಜೆ ಎಸ್ ನ್ಯಾಮಗೌಡರ್, ಸಂಚಾರಿ ಠಾಣೆ ಪಿಎಸ್ಐ ಪುಷ್ಪಾ, ಕಾಶಿನಾಥ್ ರೋಳಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.