ಬಸವಕಲ್ಯಾಣ:ಬೀದರ್ ಜಿಲ್ಲೆಯ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಕಾಮಗಾರಿಗಳಿಗಾಗಿ ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿದೆ. ಹೀಗಾಗಿ ಸೂಕ್ತ ತನಿಖೆ ಹಾಗೂ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಜಿಲ್ಲಾ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ಪ್ರಗತಿ ಪರಿಶೀಲನಾ ಹಾಗೂ ಸಲಹಾ ಸಮಿತಿ ಸದಸ್ಯ ಸಂಜು ಯಾದವ್ ಒತ್ತಾಯಿಸಿದ್ದಾರೆ.
ಈ ಕುರಿತು ಸಂಜು ಯಾದವ್ ನೇತೃತ್ವದ ಪ್ರಮುಖರ ನಿಯೋಗದಿಂದ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳಿಗೆ ಸಲ್ಲಿಸಿದೆ. ಅಲೆಮಾರಿ ಜನಾಂಗದ ಓಣಿ ಬಡಾವಣೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ 2017-18ನೇ ಸಾಲಿಗೆ 28 ಕಾಮಗಾರಿಗಳಿಗೆ ಸರ್ಕಾರದಿಂದ ರೂ. 215 ಲಕ್ಷ ಬಿಡುಗಡೆಗೊಳಿಸಲಾಗಿದೆ. ಆದರೆ, ಕೆಲ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಅಲೆ ಮಾರಿ ಜನಾಂಗದ ಬಡಾವಣೆಗಳಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಅನ್ಯ ಜನಾಂಗದವರು ವಾಸಿಸುವ ಬಡಾವಣೆಗಳಲ್ಲಿ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.