ಬಸವಕಲ್ಯಾಣ (ಬೀದರ್):ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿನಾಶಕಾರಿ ವ್ಯಕ್ತಿಗಳಾಗಿದ್ದು, ಮನಬಂದಂತೆ ಕಾಯ್ದೆಗಳನ್ನು ಜಾರಿಗೊಳಿಸಿ ಜನರನ್ನು ಸಮಸ್ಯೆಗೆ ದೂಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಆರ್‌ಪಿ ವಿರೋಧಿಸಿ ಜಂಟಿ ಕ್ರಿಯಾ ಸಮಿತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನಕ್ಕೆ ವಿರೋಧವಾದ ಯಾವುದೇ ಕಾಯ್ದೆ ಜಾರಿಗೆ ತಂದರೂ ನಾವು ವಿರೋಧ ಮಾಡುತ್ತೇವೆ. ಸಂವಿಧಾನ ಉಳಿಯಬೇಕು. ಪ್ರಜಾಪ್ರಭುತ್ವ ಉಳಿಯಬೇಕು ಎನ್ನುವ ಉದ್ದೇಶ ನಮ್ಮದು. ನಾವು ಮಾಡುತ್ತಿರುವ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಇಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಕೂಡಿ ನಗರದಲ್ಲಿ ಪ್ರತಿಭಟನೆ ಮಾಡಲು ಬೀಡಲಿಲ್ಲ. ಪೊಲೀಸರನ್ನು ಮುಂದೆ ಮಾಡಿ ಸ್ಥಳದ ಅನುಮತಿ ರದ್ದುಗೊಳಿಸಿದ್ದಾರೆ. ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಅಮಾಯಕರ ಮೇಲೆ ಪೊಲೀಸರು ಗೋಲಿಬಾರ್ ಮಾಡಿದ್ದಾರೆ ಎಂದು ಹರಿಹಾಯ್ದರು.
ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ದೇಶದ್ರೋಹಿಗಳು ಎನ್ನುವ ಕನಿಷ್ಠ ಜ್ಞಾನ ಇರಬೇಕು. ದೇಶ, ಸಮಾಜ ಮತ್ತು ಸಂವಿಧಾನ ಉಳಿಯಬೇಕಾದರೆ ಜನ ಜಾಗೃತರಾಗಬೇಕು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಬಳಿಕ ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಜೈಲಿನಲ್ಲಿರುವವರು ಅಧಿಕಾರಕ್ಕೆ ಬಂದಿರುವುದರ ಪರಿಣಾಮ ಇಂದು ದೇಶದಲ್ಲಿ ನಾನಾ ಸಮಸ್ಯೆಗಳು ಉದ್ಭವಿಸಿವೆ. ಸಿಎಎ, ಎನ್‌ಆರ್‌ಸಿ, ಎನ್‌ಆರ್‌ಪಿ ಅಷ್ಟೇ ಅಲ್ಲ. ಇಂತಹ ನೂರು ಕಾನೂನುಗಳನ್ನು ಜಾರಿಗೆ ತಂದರೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ನಾವು ಈ ದೇಶದ ಮೂಲ ನಿವಾಸಿಗಳೇ ವಿನಃ ಹೊರಗಿನಿಂದ ಬಂದವರಲ್ಲ. ಆರ್‌ಎಸ್‌ಎಸ್, ಬಿಜೆಪಿ ಬೆದರಿಕೆಗೆ ನಾನು ಬಗ್ಗೋದಿಲ್ಲ. ಜೀವ ಇರುವವರೆಗೂ ನಿಮ್ಮೊಂದಿಗೆ ಇರುತ್ತೇನೆ ಎಂದರು.