ಬೀದರ್ :ಚುನಾವಣೆಯ ಚಾಣಕ್ಯ ಎಂದೇ ಖ್ಯಾತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 3ರಂದು ಬೀದರ್ ಜಿಲ್ಲೆಗೆ ಆಗಮಿಸಲಿದ್ದು, ಬಸವಕಲ್ಯಾಣದ ಅನುಭವ ಮಂಟಪದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ವಿಜಯ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕರೂ ಆದ ಪಶು ಸಂಗೋಪನೆ ಸಚಿವ ಪ್ರಭು ಬಿ ಚೌಹಾಣ್ ತಿಳಿಸಿದರು.
ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಫೆಬ್ರವರಿ 26ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ಮಾರ್ಚ್ 3ರ ಬೆಳಗ್ಗೆ 11 ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಮಿಶ್ ಶಾ ಅವರ ಅಮೃತ ಹಸ್ತದಿಂದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಸಿಗಲಿದೆ. ಬಳಿಕ ಮಧ್ಯಾಹ್ನ 12ಕ್ಕೆ ಬಸವೇಶ್ವರ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಶ್ರೀರಾಮುಲು, ಹಾಲಪ್ಪ ಆಚಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಎಲ್ಲ ಮುಖಂಡರು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಜನ ಸೇರಲಿದ್ದಾರೆ ಎಂದು ಮಾಹಿತಿ ನೀಡಿದರು.
ನಂತರ ರಾಜ್ಯದ ಪ್ರಮುಖ ನಾಯಕರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಿಜಯ ಸಂಕಲ್ಪ ಯಾತ್ರೆ ಸಂಚರಿಸಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಹುಮನಾಬಾದ್ಗೆ ಆಗಮಿಸಲಿದ್ದು, ಅಲ್ಲಿ ಬೃಹತ್ ರೋಡ್ ಶೋ ಮತ್ತು ಸಂಜೆ 5 ಗಂಟೆಗೆ ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ಸಭೆ ಜರುಗಲಿದೆ ಎಂದರು.
ಯಾತ್ರೆ ಮಾರ್ಚ್ 4 ರಂದು ಔರಾದ (ಬಿ) ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 10 ಗಂಟೆಗೆ ವಡಗಾಂವ, 10:30ಕ್ಕೆ ಸಂತಪೂರ ಮತ್ತು 11 ಗಂಟೆಗೆ ಔರಾದ(ಬಿ) ಪಟ್ಟಣದ ಎಪಿಎಂಸಿ ವೃತ್ತದಿಂದ ಬಸ್ ನಿಲ್ದಾಣದವರೆಗೆ ಬೃಹತ್ ರೋಡ್ ಶೋ ನಡೆಯಲಿದೆ. ಅಂದು ಮಧ್ಯಾಹ್ನ 12.30 ಗಂಟೆಗೆ ಔರಾದ ತಾಲ್ಲೂಕಿನ ಆರಾಧ್ಯ ದೈವ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ 3 ಗಂಟೆಗೆ ಬೀದರ್ ನಗರದಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. ನಗರದ ರೋಟರಿ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕ ಬೊಮ್ಮಗೊಂಡೇಶ್ವರ ವೃತ್ತದವರೆಗೆ ಯಾತ್ರೆ ಸಂಚರಿಸಲಿದೆ.
ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಕಮಠಾಣಾ, 4. 15ಕ್ಕೆ ಬಗದಲ್, 4.30ಕ್ಕೆ ಮನ್ನಾಎಖ್ಖೆಳ್ಳಿಯಲ್ಲಿ ರೋಡ್ ಶೋ ನಡೆಸಿ ಸಂಜೆ 5 ಗಂಟೆಗೆ ಸುಕ್ಷೇತ್ರ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯಾತ್ರೆಯು ಕಲಬುರಗಿ ಜಿಲ್ಲೆಯ ಚಿಂಚೋಳಿಯತ್ತ ಸಾಗಲಿದೆ ಎಂದು ಹೇಳಿದರು.