ಬೀದರ್: ದೇಶದಲ್ಲಿ ಕಾಂಗ್ರೆಸ್ನವರೇ ಫೋನ್ ಟ್ಯಾಪಿಂಗ್ ಪಿತಾಮಹರು. ಅವರಿಂದಲೇ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಫೋನ್ ಕದ್ದಾಲಿಕೆ ಆರೋಪ ಬರುತ್ತಿರುವುದು ಹಾಸ್ಯಾಸ್ಪದ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಬೆಳೆ ಹಾನಿ ವೀಕ್ಷಣೆ ಮಾಡಿದ ಆರ್.ಅಶೋಕ್ ಜಿಲ್ಲಾ ಪ್ರವಾಸದಲ್ಲಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಫೋನ್ ಕದ್ದಾಲಿಕೆ ಆಗಿದೆ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸಿರುವುದಕ್ಕೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ನವರು ಫೋನ್ ಕದ್ದಾಲಿಕೆ ಕಂಡು ಹಿಡಿದ ಪಿತಾಮಹರು. ಅವರ ಮೇಲೆ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಸಾವಿರಾರು ಆರೋಪಗಳಿವೆ. ಈಗ ಅವರಿಂದಲೇ ಆರೋಪಗಳು ಕೇಳಿಬರುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆದಿ ಚುಂಚನಗಿರಿ ಮಠದ ಶ್ರೀಗಳ ಫೋನ್ ಟ್ಯಾಪಿಂಗ್ ವಿಚಾರದ ತನಿಖೆ ನಡೆಯುತ್ತಿದೆ. ಡಿಕೆಶಿ ಅವರ ಫೋನ್ ಸರಿಯಾಗಿ ಕೇಳಿಸಲ್ಲ ಅಂದ್ರೆ ಶಿವಾಜಿನಗರದ ಮೊಬೈಲ್ ಶಾಪ್ನಲ್ಲಿ ಕೊಟ್ಟು ರಿಪೇರಿ ಮಾಡಿಕೊಳ್ಳಲಿ. ಸಾಕಷ್ಟು ಜನ ಕಾರ್ಪೊರೇಟರ್ಗಳು ಶಿವಾಜಿ ನಗರದಲ್ಲಿದ್ದಾರೆ. ಅವರೇ ರಿಪೇರಿ ಮಾಡಿಕೊಡುತ್ತಾರೆ. ಆಗ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಧ್ವನಿ ಸರಿಯಾಗಿ ಕೇಳಿಸುತ್ತೆ. ಮಾಜಿ ಸಿಎಂ ಸಿದ್ದರಾಮಯ್ಯ ಅಂತೂ ಡಿಕೆಶಿಗೆ ಫೋನ್ ಮಾಡಲ್ಲ ಎಂದು ವ್ಯಂಗ್ಯವಾಡಿದರು.
ಈ ವೇಳೆಯಲ್ಲಿ ಸಂಸದ ಭಗವಂತ ಖೂಬಾ, ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ, ಮುಖಂಡರಾದ ಸೂರ್ಯಕಾಂತ ನಾಗಮಾರಪಲ್ಲಿ, ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬೆಳೆ ಹಾನಿ ವೀಕ್ಷಣೆ ಮಾಡಿದ ಆರ್.ಅಶೋಕ್: ಕಳೆದ ವಾರ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಮುಂಗಾರು ಹಂಗಾಮಿನ ರೈತರ ಬೆಳೆಗಳು ನೀರಿನಲ್ಲಿ ನಾಶವಾಗಿವೆ. ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬೀದರ್ ತಾಲೂಕಿನ ಬೆನಕನಳ್ಳಿ ಗ್ರಾಮದ ರೈತರ ಗದ್ದೆಯಲ್ಲಿ ಹೆಸರು, ತೊಗರಿ, ಉದ್ದು, ಸೋಯಾಬಿನ್, ಎಳ್ಳು ಬೆಳೆಗಳು ನಾಶವಾಗಿರುವುದನ್ನು ಕಂಡು ಮಳೆರಾಯನ ಅವಕೃಪೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ ಎಂದರು.