ಬಸವಕಲ್ಯಾಣ: ನಗರಸಭೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಅನಧಿಕೃತ ನಿವೇಶನಗಳಿಗೆ ನಂಬರ್ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಹಣ ಪಡೆಯದೆ ಯಾವುದೇ ಕೆಲಸ ಕಾರ್ಯಗಳು ಸಹ ಆಗುತ್ತಿಲ್ಲ ಎಂದು ಖುದ್ದು ನಗರಸಭೆ ಸದಸ್ಯರೇ ಆರೋಪಿಸಿ, ತಕ್ಷಣ ಕ್ರಮ ಕೈಗೊಂಡು ವ್ಯವಸ್ಥೆಯ ಸುಧಾರಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ನಗರ ಸಭೆಯಲ್ಲಿ ಅಧ್ಯಕ್ಷ ನಾಹಿದಾ ಅಫ್ಸರ್‌ಮಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಬ್ಬರು ಹಿರಿಯ ಸದಸ್ಯರು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು. ನಗರಸಭೆಯಲ್ಲಿನ ಅವ್ಯವಸ್ಥೆ, ಕೆಲ ಸಿಬ್ಬಂದಿಯ ಬೇಜವ್ದಾರಿತನ ಸೇರಿದಂತೆ ಇತರ ಎಡವಟ್ಟುಗಳನ್ನು ಬಿಚ್ಚಿಡುವ ಮೂಲಕ ತರಾಟೆಗೆ ತೆಗೆದುಕೊಂಡು, ವ್ಯವಸ್ಥೆ ಸುಧಾರಣೆಗೆ ಸಲಹೆ ನೀಡಿದರು.
ಹಿರಿಯ ಸದಸ್ಯ ರವೀಂದ್ರ ಗಾಯಕವಾಡ ವಿಷಯ ಪ್ರಸ್ತಾಪಿಸಿ, 15ನೇ ಹಣಕಾಸು ಯೋಜನೆಯಡಿ 4.6 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಯಾರು ಸಿದ್ಧಪಡಿಸಿದ್ದಾರೆ. ನಗರದಲ್ಲಿ ಗಾಂಧಿ ವೃತ್ತದ ಬಳಿ ರಸ್ತೆ ಕೆಟ್ಟಿದೆ. ಇಂತಹ ಅಗತ್ಯವಾದ ಸ್ಥಳಗಳಲ್ಲಿ ಕಾಮಗಾರಿ ನಡೆಯದೇ ಅನಗತ್ಯ ಸ್ಥಳದಲ್ಲಿ ಕಾಮಗಾರಿ ಇಟ್ಟಿರುವುದು ನಾಚಿಕೆಯ ವಿಷಯವಾಗಿದೆ. ಈ ಕ್ರಿಯಾ ಯೋಜನೆ ರದ್ದುಪಡಿಸಿ ಹೊಸದಾಗಿ ಉತ್ತಮ ಕ್ರಿಯಾ ಯೋಜನೆ ರೂಪಿಸಿ ಎಂದರು. ಇದಕ್ಕೆ ಸದಸ್ಯರು ಕೂಡ ಧ್ವನಿಗೂಡಿಸಿದರು.