ಕರ್ನಾಟಕ

karnataka

ETV Bharat / state

ಗಡಿ ಜಿಲ್ಲೆ ಬೀದರ್​ನಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಸಾವಿರ ಮೀಟರ್​ ಉದ್ದದ ಕನ್ನಡ ಬಾವುಟ ಹಿಡಿದು ಮೆರವಣಿಗೆ

67ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಗಡಿ ಕನ್ನಡೋತ್ಸವ ಪ್ರಯುಕ್ತ ಜೈ ಭಾರತ ಮಾತಾ ಸೇವಾ ಸಮಿತಿಯ ತಾಲೂಕು ಘಟಕದ ವತಿಯಿಂದ ಭಾಲ್ಕಿ ಪಟ್ಟಣದಲ್ಲಿ ಬುಧವಾರ ನಡೆದ ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಹಾಗೂ ಅಲಂಕೃತ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯು ಸಾರ್ವಜನಿಕರಲ್ಲಿ ಕನ್ನಡಾಭಿಮಾನ ಮೂಡಿಸಿತು.

kannada rajyotsava celebrated in bidar
ಗಡಿಜಿಲ್ಲೆ ಬೀದರ್​ನಲ್ಲಿ ಕನ್ನಡ ರಾಜ್ಯೋತ್ಸವ

By

Published : Nov 30, 2022, 9:41 PM IST

ಬಾಲ್ಕಿ(ಬೀದರ್): ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಸಾವಿರ ಮೀಟರ್​ ಉದ್ದದ ಕನ್ನಡ ಬಾವುಟವನ್ನು ಹಿಡಿದು ಮೆರವಣಿಗೆ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಮೆರವಣಿಗೆ ಉದ್ದಕ್ಕೂ ಕನ್ನಡ ಪರ ಹಾಗೂ ತಾಯಿ ಭುವನೇಶ್ವರಿಗೆ ಜೈಕಾರದ ಘೋಷಣೆಗಳು ಮೊಳಗಿದವು.

ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಪುರಭವನ ವರೆಗೆ ನಡೆಯಿತು.

ಡೊಳ್ಳು ಕುಣಿತ, ತಮಟೆ ವಾದನ, ಹಗಲು ವೇಷ, ವೀರಗಾಸೆ ಮೊದಲಾದ ಕಲಾ ತಂಡಗಳ ಪ್ರದರ್ಶನ ಸಾಂಸ್ಕಂತಿಕ ವೈಭವವನ್ನೇ ಸೃಷ್ಟಿಸಿತು.
ಮೆರವಣಿಗೆ ಮಾರ್ಗದಲ್ಲಿನ ವೃತ್ತಗಳಲ್ಲಿ ಇರುವ ಮಹಾ ಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ಅಂಬೇಡ್ಕರ್ ವೃತ್ತದಲ್ಲಿ ನಾಲ್ಕು ಜೆಸಿಬಿಗಳಿಂದ ಕನ್ನಡ ಬಾವುಟ, ತಾಯಿ ಭುವನೇಶ್ವರಿ ಹಾಗೂ ದಿ. ಚಿತ್ರನಟ ಪುನೀತ್ ರಾಜಕುಮಾರ ಭಾವಚಿತ್ರದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು ಮತ್ತು ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಲಾಯಿತು. ಪಟ್ಟಣದ ತುಂಬೆಲ್ಲ ಕನ್ನಡಮಯ ವಾತಾವರಣ ನಿರ್ಮಾಣಗೊಂಡಿತ್ತು.

ಮೆರವಣಿಗೆಗೆ ಚಾಲನೆ: ತಹಶೀಲ್ದಾರ್ ಕೀರ್ತಿ ಚಾಲಕ್ ಮೆರವಣಿಗೆಗೆ ಚಾಲನೆ ನೀಡಿದರು, ಪುರಸಭೆ ಅಧ್ಯಕ್ಷ ಅನಿಲ್ ಸುಂಟೆ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಜೈ ಭಾರತ ಮಾತಾ ಸೇವಾ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ನಾಗಭೂಷಣ ಮುಡಬಿ, ಭಾಲ್ಕಿ ನಗರ ವೃತ್ತ ಸಿಪಿಐ ಗುರಣ್ಣ ಎಸ್.ಹೆಬ್ಬಾಳೆ, ಗ್ರಾಮೀಣ ಸಿಪಿಐ ವೀರಣ್ಣ ದೊಡ್ಡಮನಿ, ವಲಯ ಅರಣ್ಯ ಅಧಿಕಾರಿಗಳಾದ ಪ್ರವೀಣಕುಮಾರ ಮೋರೆ, ಶ್ರೀಮಂತ ಸಪಾಟೆ ಮೊದಲಾದವರು ಪಾಲ್ಗೊಂಡಿದ್ದರು. ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನ.. ನಾಳೆಯಿಂದ ಕನ್ನಡ ರಥಯಾತ್ರೆ ಪ್ರಾರಂಭ

ABOUT THE AUTHOR

...view details