ಬೀದರ್ : ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಗಾಂಜಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು 3 ಪ್ರತ್ಯೇಕ ಪ್ರಕರಣಗಳಲ್ಲಿ 6 ಜನರನ್ನು ಬಂಧಿಸಿ 1.65 ಕೋಟಿ ರೂ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಹೇಳಿದರು. ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದರು.
ಏಪ್ರಿಲ್ 17 ರಂದು ಆಂಧ್ರ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಚಿಟಗುಪ್ಪಾ ಮಾರ್ಗವಾಗಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ತಕ್ಷಣ ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಭಂಗೂರ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಆರೋಪಿಗಳು ಮಾರ್ಗ ಬದಲಾಯಿಸಿ ಒಳಮಾರ್ಗದಿಂದ ಸಂಚರಿಸಲು ಯತ್ನಿಸಿದ್ದರು. ಎಂದು ತಿಳಿಸಿದರು.
5 ಕೆಜಿ 30 ಗ್ರಾಂ ಗಾಂಜಾ ವಶ: ನಗರದಲ್ಲಿ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ಆರೋಪಿಯಿಂದ 4.78,000 ಮೌಲ್ಯದ 4.478 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳಿಂದ 5,03,000 ಮೌಲ್ಯದ 5 ಕೆಜಿ 30 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಒಬ್ಬ ಆರೋಪಿ ಪರಾರಿಯಾಗಿದ್ದು, ಬಲೆ ಬೀಸಲಾಗಿದೆ ಎಂದು ಹೇಳಿದರು.