ಬೀದರ್: ನಾರ್ವೆ ಹಾಗೂ ಕತಾರ್ ದೇಶದಿಂದ ಮರಳಿದ ಶಂಕಿತ ರೋಗಿಗಳಿಬ್ಬರ ರಕ್ತ ಮಾದರಿ ಪರೀಕ್ಷೆಗೊಳಪಡಿಸಿದ್ದು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತರು ಪತ್ತೆಯಾಗಿಲ್ಲ ಎಂದು ಬ್ರಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಅಂತೇಪ್ಪಾ ಸ್ಪಷ್ಟವಾಗಿ ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯ ಕೊರೊನಾ ಸ್ಪೆಶಲ್ ವಾರ್ಡ್ನಲ್ಲಿ ರೋಗಿಗಳು ದಾಖಲಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಎಫೆಕ್ಟ್ ಆರಂಭವಾಗಿದೆ ಎಂಬ ಸುಳ್ಳು ಸುದ್ದಿ ಹರಡಿದೆ. ಆಸ್ಪತ್ರೆಯಲ್ಲಿ ವಿದೇಶದಿಂದ ಜ್ವರ, ನೆಗಡಿ ಬಾಧೆಯಿಂದ ಬಳಲುತ್ತಿದ್ದ ರೋಗಿಗಳ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಕಳೆದ ಎರಡು ವಾರದ ಹಿಂದಷ್ಟೇ ನಾರ್ವೆಯಿಂದ ಬಂದ ಹನುಮಂತ ಹಾಗೂ ಕತಾರ್ ದೇಶದಿಂದ ಬಂದ ಶಿವಕುಮಾರ್ ಹಾಗೂ ಅವರ ಪುತ್ರ ಸೇರಿ ಒಟ್ಟು ಮೂರು ಮಂದಿಯ ರಕ್ತದ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಹೊರ ದೇಶದಿಂದ ಬಂದ ಜನರು ಜ್ವರದಿಂದ ನರಳುತ್ತಿರುವಾಗ ಮುನ್ನೆಚ್ಚರಿಕೆ ಕ್ರಮವಾಗಿ ರಕ್ತ ಹಾಗೂ ಕಫದ ಮಾದರಿ ಪರೀಕ್ಷೆ ಅನಿವಾರ್ಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಈ ಮೂವರು ರೋಗಿಗಳನ್ನು ಸಂಶಯದ ಆಧಾರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ 'ಈಟಿವಿ ಭಾರತ್ 'ಗೆ ಹೇಳಿದ್ದಾರೆ.