ಬೀದರ್ :ಜಮೀನಿಗೆ ಹೋಗುವ ದಾರಿ ವಿಚಾರವಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ (46) ಎಂದು ಗುರುತಿಸಲಾಗಿದೆ. ಈ ವೇಳೆ ಮಲ್ಲಿಕಾರ್ಜುನ ಪುತ್ರನಿಗೂ ಗಂಭೀರ ಗಾಯವಾಗಿದ್ದು, ಇವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮೀನಿಗೆ ತೆರಳುವ ದಾರಿಗೆ ಕಲ್ಲು ಹಾಕಿದ್ದನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಶ್ನೆ ಮಾಡಿದ್ದರು. ಈ ಸಂಬಂಧ ನಿರ್ಣಾ ಗ್ರಾಮದಿಂದ ಬಂದ 8-9 ಜನರ ತಂಡ ಮಲ್ಲಿಕಾರ್ಜುನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದೆ. ದಾಳಿಯಿಂದ ಗಂಭೀರ ಗಾಯಗೊಂಡ ಮಲ್ಲಿಕಾರ್ಜುನ ಜಮೀನಿನಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ಅವರನ್ನು ಮನ್ನಾಏಖೇಳಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.