ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ನಗರದಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನೆ ರದ್ದುಗೊಂಡಿದ್ದು, ನಗರದಲ್ಲಿ ಜನಜೀವನ ಎಂದಿನಂತೆ ಕಂಡುಬಂತು.
ಜಮಾತೆ ಇಸ್ಲಾಮಿ ಹಿಂದ್, ಜಮಾತ್ ಉಲ್ಮಾ ಹಿಂದ್, ಬೀಮ್ ಆರ್ಮಿ ಸೇರಿದಂತೆ ವಿವಿಧ ಮುಸ್ಲಿಂ ಪರ ಸಂಘಟನೆಗಳು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ, ನಗರದ ಬಂದ್ ಆಚರಣೆಗೆ ನಿರ್ಧರಿಸಿದ್ದವು. ಆದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿರುವ ಬಗ್ಗೆ ಸುಳಿವು ಅರಿತ ರಾಜ್ಯ ಸರ್ಕಾರ ಬುಧವಾರ ಸಂಜೆಯೇ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೊಳಿಸುವ ಮೂಲಕ ಪ್ರತಿಭಟನೆಗೆ ಅವಕಾಶ ನಿರಾಕರಿಸಿತು.
144 ಸೆಕ್ಷನ್ ಜಾರಿಯಿಂದ ಶಾಂತಿಯುತ ಪ್ರತಿಭಟನೆಗೂ ಬ್ರೇಕ್ ಸರ್ಕಾರದ ಆದೇಶ ಹೊರ ಬೀಳುತಿದ್ದಂತೆ ತಡ ರಾತ್ರಿ 1 ಗಂಟೆವರೆಗೆ ನಗರದ ಶಾಸಕರ ಕಚೇರಿಯಲ್ಲಿ ಸಭೆ ಸೇರಿದ ಸಂಘಟನಾಕಾರರು, ಶಾಸಕ ಬಿ. ನಾರಾಯಣರಾವ ಸಮ್ಮುಖದಲ್ಲಿ ಮುಂದಿನ ತಯಾರಿ ಬಗ್ಗೆ ಚರ್ಚೆ ನಡೆಸಿದವು. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ, ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಶಾಸಕರ ಮೇಲೆ ಒತ್ತಡವನ್ನೂ ಹೇರಲಾರಂಭಿಸಿದ್ದರು.
ಆದರೆ ಇದಕ್ಕೆ ಜಗ್ಗದ ಶಾಸಕ ನಾರಾಯಣರಾವ, ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ಕೈಬಿಡುವ ಮೂಲಕ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಕಾರ್ಯಾಲಯದಲ್ಲಿ ನಡೆದ ಸಭೆಗೆ ಹಾಜರಾಗಿದ್ದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ನಗರಠಾಣೆ ಪಿಎಸ್‌ಐ ಸುನೀಲಕುಮಾರ, ಸರ್ಕಾರದ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಿದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟನೆಗಳ ಮುಖ್ಯಸ್ಥರಿಗೆ ಖಡಕ್ ಸಂದೇಶ ರವಾನಿಸಿದರು.
ಹೀಗಾಗಿ ಅನ್ಯ ಮಾರ್ಗವಿಲ್ಲದೆ ಪ್ರತಿಭಟನೆ ಕೈ ಬಿಡುವ ಬಗ್ಗೆ ಸಂಘಟನೆಗಳ ಪ್ರಮುಖರು ನಿರ್ಧಾರ ಪ್ರಕಟಿಸಿದರು.ಪ್ರತಿಭಟನೆ ರದ್ದುಗೊಂಡರೂ ಸಹ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಸ್ತ್ ಮಾಡಲಾಗಿತ್ತು.
ಆಯ್ದ ಸ್ಥಳದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ, ಸಂಘಟನೆಗಳ ಪ್ರಮುಖರ ಮೇಲೆ ನಿಗಾ ವಹಿಸಲಾಗಿತ್ತು. ಪ್ರತಿಭಟನೆ, ರ‍್ಯಾಲಿ ಅಥವಾ ಬಂದ್ ಇಲ್ಲದ ಕಾರಣ ನಗರದಲ್ಲಿ ಜನ ಜೀವನ ಎಂದಿನಂತೆ ಕಂಡು ಬಂತು.