ಕರ್ನಾಟಕ

karnataka

ETV Bharat / state

ಪ್ರಕಾಶ ಖಂಡ್ರೆಗೆ ಬಿಜೆಪಿ ಪರಿಷತ್‌ ಟಿಕೆಟ್‌ ಘೋಷಣೆ; ಕೇಸರಿ ಪಕ್ಷದ ಲೆಕ್ಕಾಚಾರ ಹೀಗಿದೆ.. - ಬಿಜೆಪಿ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬೀದರ್‌ನಿಂದ ಪ್ರಕಾಶ ಖಂಡ್ರೆಯನ್ನು ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ. ಆ ಮೂಲಕ ಕಾಂಗ್ರೆಸ್‌ ಶಾಸಕ ಈಶ್ವರ ಖಂಡ್ರೆಗೆ ಮುಂದಿನ ದಿನಗಳಲ್ಲಿ ಪ್ರಬಲ ಪೈಪೋಟಿ ನೀಡಲು ಕೇಸರಿ ಪಕ್ಷ ಮುಂದಾಗಿದೆ.

Ex Mla Prakash Khandre got Bjp mlc ticket from Bidar
ಪ್ರಕಾಶ ಖಂಡ್ರೆಗೆ ಪರಿಷತ್‌ ಟಿಕೆಟ್‌ ಘೋಷಣೆ; ಕೇಸರಿ ಪಕ್ಷದ ಲೆಕ್ಕಾಚಾರವೇನು?

By

Published : Nov 20, 2021, 3:54 AM IST

ಬೀದರ್: ಬಸವಕಲ್ಯಾಣ ಉಪ ಚುನಾವಣೆ ವೇಳೆಯಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಆ ಮೂಲಕ ಬಿಜೆಪಿ ಹೈ ಕಮಾಂಡ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ರಣತಂತ್ರವನ್ನು ರೂಪಿಸಿದೆ.

1999 ಹಾಗೂ 2004 ರಲ್ಲಿ ಎರಡು ಬಾರಿ ಭಾಲ್ಕಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಪ್ರಕಾಶ ಖಂಡ್ರೆ ಅವರು ಈಗ ಪರಿಷತ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇದರ ಹಿಂದೆ ಬಿಜೆಪಿ ಹೈಕಮಾಂಡ್ ಬೀದರ್ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವುದಲ್ಲದೆ ಬಿಜೆಪಿ ಮುಂದಿನ ದಿನಗಳಲ್ಲಿ ಬರುವ ಸವಾಲುಗಳನ್ನು ಸುಧಾರಿಸುವ ಮಟ್ಟದಲ್ಲಿ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಮೂಲ ಬಿಜೆಪಿಯವರೇ ಆದ ಪ್ರಕಾಶ ಖಂಡ್ರೆ ಅವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿ ವಿಧಾನಸಭೆ ಟಿಕೆಟ್ ಕೈ ತಪ್ಪಿ ಡಿ.ಕೆ ಸಿದ್ರಾಮ ಅವರ ಪಾಲಾಗಿದಕ್ಕೆ ಅಸಮಾಧಾನಗೊಂಡು ಜೆಡಿಎಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡಿದ್ರು. ಎರಡು ವರ್ಷಗಳ ಕಾಲ ಮನೆಯಲ್ಲೆ ಇದ್ದ ಪ್ರಕಾಶ ಖಂಡ್ರೆ ಅವರನ್ನು ಬಸವಕಲ್ಯಾಣ ಉಪ ಚುನಾವಣೆ ವೇಳೆಯಲ್ಲಿ ಚುನಾವಣೆ ಉಸ್ತುವಾರಿಯಾಗಿರುವ ಆಗಿನ ಗೃಹ ಸಚಿವರು, ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ವಿ.ಸೋಮಣ್ಣ, ಪ್ರಭು ಚವ್ಹಾಣ ಹಾಗೂ ಲಕ್ಷ್ಮಣ ಸೌದಿ ಸೇರಿದಂತೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಪ್ರಕಾಶ ಖಂಡ್ರೆ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದರು. ಇದರಿಂದಾಗಿ ಬಸವಕಲ್ಯಾಣ ಕ್ಷೇತ್ರದ ಹುಲಸೂರು, ನಾರಾಯಪೂರ್ ಭಾಗದಲ್ಲಿನ ಪ್ರಕಾಶ ಖಂಡ್ರೆ ಅವರ ಪ್ರಭಾವದ ಮತಗಳು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ಒಂದೇ ಕಲ್ಲಿನಲ್ಲಿ ಎರಡು ಬೇಟೆ
ಬೀದರ್ ಜಿಲ್ಲಾ ರಾಜಕೀಯದಲ್ಲಿ ಪ್ರಬಲ ಜನಪ್ರತಿನಿಧಿಗಳ ಕೊರತೆ ಬಿಜೆಪಿಗೆ ಕಾಡುತ್ತಿತ್ತು. ಅದರಂತೆ ಭಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮುಂದೆ ಭಾಲ್ಕಿಯಲ್ಲೆ ಪ್ರಬಲ ನಾಯಕತ್ವದ ಅಗತ್ಯವಿತ್ತು. ವಿಧಾನಸಭೆ ಚುನಾವಣೆ ಬಂದಾಗಲೊಮ್ಮೆ ಮಾಜಿ ಸಿಎಂ ಬಿಎಸ್‌ವೈ ಬೆಂಬಲಿಗ ಡಿ.ಕೆ ಸಿದ್ರಾಮ್ ಹಾಗೂ ಪ್ರಕಾಶ ಖಂಡ್ರೆ ಅವರ ಒಳ ಸ್ಪರ್ಧೆಯಿಂದ ಪಕ್ಷಕ್ಕೆ ಹಾನಿಯಾಗ್ತಿತ್ತು. ಇದನ್ನು ಅರಿತ ಹೈಕಮಾಂಡ್ ಪ್ರಕಾಶ ಖಂಡ್ರೆ ಅವರಿಗೆ ಪರಿಷತ್ ಟಿಕೆಟ್ ನೀಡುವುದು ಡಿ.ಕೆ ಸಿದ್ರಾಮ್‌ಗೆ ಮುಂದಿನ ಚುನಾವಣೆಯಲ್ಲಿ ವಿಧಾನಸಭೆ ಟಿಕೆಟ್ ನೀಡುವುದರೊಂದಿಗೆ ಪಕ್ಷ ಪ್ರಬಲವಾಗುವುದಷ್ಟೇ ಅಲ್ಲ. ಶಾಸಕ ಈಶ್ವರ ಖಂಡ್ರೆ ವಿರುದ್ದ ಸಾಮೂಹಿಕವಾಗಿ ರಾಜಕೀಯ ಎದುರಿಸಬಹುದು ಎಂಬ ಲೆಕ್ಕಾಚಾರವಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಕೊನೆ ಕ್ಷಣದವರೆಗೆ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರನ್ನು ಬಿಜೆಪಿ ಪರಿಷತ್ ಅಭ್ಯರ್ಥಿ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ನಿಗದಿಯಂತೆ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರ ಹೆಸರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರು ಘೋಷಣೆ ಮಾಡ್ತಿದ್ದಂತೆ ಎಲ್ಲಾ ಲೆಕ್ಕಾಚಾರಗಳು ಸ್ತಬ್ದವಾಗಿವೆ.

ಖಂಡ್ರೆಗೆ ಟಿಕೆಟ್ ಅಭಿಮಾನಿಗಳ ಸಂಭ್ರಮ:
ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್ ನೀಡುತ್ತಿದ್ದಂತೆ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಭಾಲ್ಕಿಯಲ್ಲಿ ಪ್ರಕಾಶ ಖಂಡ್ರೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ABOUT THE AUTHOR

...view details