ಬೀದರ್:ಕಂಟೈನ್ಮೆಂಟ್ ಝೋನ್ಗಳಲ್ಲಿ ಸುತ್ತಾಡಿ ಜನರ ಆರೋಗ್ಯ ಕಾಪಾಡುತ್ತಿರುವ ವೈದ್ಯಾಧಿಕಾರಿಗೆ ಕೊರೊನಾ ಸೋಂಕು ತಗುಲಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ್ ಸೇರಿ 80ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ವೈದ್ಯರಿಗೂ ತಗುಲಿದ ಕೊರೊನಾ: ತಹಶೀಲ್ದಾರ್ ಸೇರಿ 80ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ಜಿಲ್ಲೆಯ ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗೆ ಸೋಂಕು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಅವರು ಪಾಲ್ಗೊಂಡ ಸಭೆಗಳಲ್ಲಿದ್ದ ಡಿಎಚ್ಒ ಹಾಗೂ ಸಹಾಯಕ ಆಯುಕ್ತರು ಕೂಡ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸಂತಪೂರ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲ್ವಿಚಾರಕರಾಗಿ ಕರ್ತವ್ಯದಲ್ಲಿದ್ದ ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅಲ್ಲದೆ 2ನೇ ಹಂತದ ಸಂಪರ್ಕಿತರ ಪಟ್ಟಿಯೂ ಸಿದ್ಧಪಡಿಸಲಾಗುತ್ತಿದೆ. ಔರಾದ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಸೋಂಕು ದೃಢವಾಗುತ್ತಿದ್ದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಯ ಎಲ್ಲಾ ಪ್ರಮುಖ ಮುಖ್ಯ ದ್ವಾರಗಳಿಗೆ ಬೀಗ ಹಾಕಿ ಕ್ರಮ ಕೈಗೊಳ್ಳಲಾಗಿದ್ದು, ಸ್ಯಾನಿಟೈಸರ್ ಸಿಂಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.