ಬೀದರ್ : ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ಡ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 1.23 ಕೋಟಿ ರೂ. ಮೌಲ್ಯದ 118 ಕೆ.ಜಿ ಗಾಂಜಾ, ಒಂದು ಮಾರುತಿ ಸುಜುಕಿ ಕಾರು, 3 ಮೊಬೈಲ್ ಫೋನ್ ಹಾಗೂ 15 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ.ಎಸ್.ಎಲ್ ಹೇಳಿದರು.
ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಜೂನ್ 24ರಂದು ಬೆಳ್ಳಗ್ಗೆ ಬೀದರ್ನಿಂದ ಹುಮನಾಬಾದ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ರಾಮ್ ರಾಜ್ ಕಾಲೇಜಿನ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಆರೋಪಿ ಕರ್ನಾಟಕ ಮೂಲದವನಾಗಿದ್ದು, ಇನ್ನೋರ್ವ ಯುಪಿ ಮೂಲದ ಮಹಾರಾಷ್ಟ್ರ ನಿವಾಸಿಯಾಗಿದ್ದಾನೆ" ಎಂದರು.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಮೆಚ್ಚಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬಹುಮಾನ ವಿತರಿಸಲಿದ್ದಾರೆ. ಜಿಲ್ಲೆಯಿಂದ ಅಂತಾರಾಜ್ಯ ಗಾಂಜಾ ಸಾಗಾಣಿಕೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ 16 ಅಕ್ರಮ ಗಾಂಜಾ ಸಾಗಾಣಿಕೆ ಪ್ರಕರಣಗಳನ್ನು ಭೇದಿಸಿ 10.17 ಕೋಟಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಮಫ್ತಿಯಲ್ಲಿ ಪೊಲೀಸ್ ಠಾಣೆ ಕಾರ್ಯವೈಖರಿ ಪರಿಶೀಲನೆ : ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ ಎನ್ನುವ ಮಾಹಿತಿ ಪಡೆಯಲು 29 ಸಿಬ್ಬಂದಿಯನ್ನು ಜಿಲ್ಲೆಯ 29 ವಿವಿಧ ಠಾಣೆಗೆ ತೆರಳಿ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಲಾಗಿತ್ತು. 29 ಠಾಣೆಗಳಲ್ಲಿ 20 ಠಾಣೆಯ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸಿ, ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ, ಉಳಿದ 9 ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿದವರಿಗೆ ಎಎಸ್ಪಿ ಹಾಗೂ ಡಿಎಸ್ಪಿ ಅವರಿಂದ ತಿಳುವಳಿಕೆ ನೀಡಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಹೇಳಿದರು.