ಬೀದರ್: ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತಿದ್ದಂತೆ ಇತರೆ ಹಣ್ಣುಗಳು ಸೈಲೆಂಟಾಗಿ ಪಕ್ಕಕ್ಕೆ ಸರಿಯಬೇಕಿತ್ತು. ಆದ್ರೆ ಮಹಾಮಾರಿ ಕೋವಿಡ್-19 ಹಣ್ಣುಗಳ ರಾಜನಿಗೂ ಮಹಾ ಹೊಡೆತವನ್ನೇ ನೀಡಿದೆ. ಬೀದರ್ ಜಿಲ್ಲೆಯಲ್ಲಿನ ಮಾರುಕಟ್ಟೆಗಳಲ್ಲಿ ಉಪ್ಪಿನಕಾಯಿಗೆ ಬಳಸುವ ಮಾವು ಮತ್ತು ಹಣ್ಣು ಖರೀದಿಗೆ ಜನ ಬರುತ್ತಿಲ್ಲ. ಇದರಿಂದ ರೈತರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜನರಿಗೆ ಬೇಡವಾಯ್ತು 'ಉಪ್ಪಿನಕಾಯಿ' ಮಾವು; ಬೀದರ್‌ನಲ್ಲಿ ವ್ಯಾಪಾರಿಗಳ ಕಂಗಾಲು ಕೊರೊನಾ ವೈರಸ್ ಭೀತಿಯಿಂದ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾರಾಟವಾಗುವ ಉಪ್ಪಿನಕಾಯಿಗೆ ಬೇಕಾಗುವ ಮಾವು ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಪ್ರತಿವರ್ಷ ಉಪ್ಪಿನಕಾಯಿ ಮಾವು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ 300 ಕ್ಕೂ ಹೆಚ್ಚು ಕುಟುಂಬಗಳು ಕಂಗಾಲಾಗಿವೆ.
ಉಪ್ಪಿನಕಾಯಿಗಾಗಿ ಪ್ರತಿವರ್ಷ ಮಾರುಕಟ್ಟೆಯಲ್ಲಿ ಹಸಿರು ಮಾವಿಗೆ ಸಾಕಷ್ಟು ಬೇಡಿಕೆ ಇರ್ತಿತ್ತು. ಇದಕ್ಕಾಗಿ ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಕುಟುಂಬಗಳು ಬೇಸಿಗೆ ಆರಂಭದಲ್ಲೇ ರೈತರಿಂದ ಮಾವಿನ ಮರಗಳಲ್ಲಿನ ಫಸಲು ಖರೀದಿಸುತ್ತಿದ್ದರು. ಜೂನ್‌ನಲ್ಲಿ ಮಾರುಕಟ್ಟೆಗೆ ತಂದು ಒಳ್ಳೆ ಸಂಪಾದನೆ ಮಾಡ್ತಿದ್ರು. ಆದ್ರೆ ಈ ವರ್ಷ ನಷ್ಟದ ಭೀತಿ ಎದುರಾಗಿದೆ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ಯಾಸೀಫ್ ಖಾನ್
ಮಾರುಕಟ್ಟೆಯಲ್ಲಿ 1 ಮಾವಿನಕಾಯಿ 3 ರೂಪಾಯಿಯಿಂದ 10 ರೂಪಾಯಿವರೆಗೆ ಸಿಗುತ್ತೆ. ಇದನ್ನು ಸ್ಥಳದಲ್ಲೇ ಕಟ್ ಮಾಡಿ ಕೊಡಲು 2 ರಿಂದ 5 ರೂಪಾಯಿ ಪಡೆಯಲಾಗುತ್ತೆ. ಆದರೆ ಸುಮಾರು 2000 ಜನರ ಉದ್ಯೋಗಕ್ಕೆ ಆಸರೆಯಾದ ಈ ಹುಳಿ ಮಾವಿನ ವ್ಯಾಪಾರ ಕೊರೊನಾ ಹೊಡೆತಕ್ಕೆ ಬಲಿಯಾಗಿದೆ ಅಂತಾರೆ ಮತ್ತೊಬ್ಬ ವ್ಯಾಪಾರಿ ಜಾವೀದ್.
ಒಟ್ಟಿನಲ್ಲಿ ಕೊರೊನಾ ಹೊಡೆತಕ್ಕೆ ದೇಶವೇ ನಲುಗಿ ಹೋಗಿದ್ದು ಬಡವರ ಬಾಳಿಗೆ ಆಸರೆಯಾದ ಹುಳಿಮಾವಿನ ವ್ಯಾಪಾರಿಗಳ ಬದುಕಿಗೆ ಬರೆ ಎಳೆದಂತಾಗಿದೆ. ಸರ್ಕಾರ ಹುಳಿಮಾವು ಬೀದಿ ಬದಿಯ ವ್ಯಾಪಾರಿಗಳ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ.