ಬೀದರ್: ಕೊರೊನಾ ಸೋಂಕಿತರು ಹಾಗೂ ಶಂಕಿತರು ಹೆಚ್ಚಳವಾದ ಹಿನ್ನೆಲೆಯಲ್ಲಿ ಸರ್ಕಾರ ಬೀದರ್‌ನಲ್ಲಿ ಎರಡು ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಒಪ್ಪಿಗೆ ಸೂಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬೀದರ್‌ನಲ್ಲಿಯೇ ಪರೀಕ್ಷಾ ಕೇಂದ್ರ ಪ್ರಾರಂಭಿಸಲು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಕೋರಲಾಗಿತ್ತು ಎಂದಿದ್ದಾರೆ.
ರೋಗಿಗಳ ರಕ್ತ ಮತ್ತು ಗಂಟಲು ದ್ರವ ಪರೀಕ್ಷಾ ಕೇಂದ್ರ ಬೆಂಗಳೂರು ಮತ್ತು ಕಲಬುರಗಿಯಲ್ಲಿ ಇದ್ದು, ಪ್ರತಿನಿತ್ಯ ಪರೀಕ್ಷಾ ಕೇಂದ್ರಕ್ಕೆ ರಕ್ತ ಮತ್ತು ಗಂಟಲು ದ್ರವ ಕಳುಹಿಸಿಕೊಡುವುದರಿಂದ ಅವುಗಳ ವರದಿ ಬರುವುದು ತಡವಾಗುತ್ತಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾವು ನಡೆಸಿದ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಈ ಕಾರಣದಿಂದ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದು ತಿಳಿಸಿದ್ದಾರೆ.
ಈಗಾಗಲೇ 13 ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೀದರ್ಅನ್ನು ಹಾಟ್ ಸ್ಪಾಟ್ ಜಿಲ್ಲೆಯಾಗಿ ಗುರುತಿಸಲಾಗಿದೆ. ಇದುವರೆಗೆ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕದಲ್ಲಿರುವವರ ಸಂಖ್ಯೆ ಕೂಡ ಸಾವಿರದ ಗಡಿಯನ್ನು ದಾಟಿದೆ. ಹೀಗಾಗಿ ಪರಿಕ್ಷಾ ಕೇಂದ್ರ ಸ್ಥಾಪನೆ ಅತ್ಯವಾಗಿತ್ತು ಎಂದಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಬ್ರಿಮ್ಸ್ ನಿರ್ದೇಶಕರಿಗೆ ಸೂಕ್ತ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದು, ಶೀಘ್ರದಲ್ಲಿಯೇ ಪರೀಕ್ಷಾ ಕೇಂದ್ರ ಆರಂಭಿಸಲಾಗುತ್ತದೆಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.