ಕರ್ನಾಟಕ

karnataka

ETV Bharat / state

ಸಮಗ್ರ ಕೃಷಿಯಿಂದ ಖುಷಿ ಬದುಕು ... ಬರದ ನಾಡು ಬೀದರ್​ಗೆ ಈತ ಮಾದರಿ ರೈತ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕೇಸರ ತುಂಗಾವ್ ಗ್ರಾಮದ ಪಂಡಿತ್ ಕೋಲೇಕಾರ್ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ಈ ಮೂಲಕ ಬರದ ನಾಡಲ್ಲಿ ನಿರಂತರ ಆದಾಯ ಗಳಿಸಿ ಜಿಲ್ಲೆಯ ರೈತರ ಗಮನ ಸೆಳೆದಿದ್ದಾರೆ.

By

Published : Mar 14, 2019, 11:42 AM IST

ಮಾದರಿ ರೈತ

ಬೀದರ್:ಕೃಷಿಯಲ್ಲಿ ತೋಟಗಾರಿಕೆಯ ಸಮಗ್ರ ಬೇಸಾಯದಿಂದ ಬಂಗಾರದ ಬದುಕು ಕಟ್ಟಿಕೊಂಡಿರುವ ರೈತ, ಬರಡು ಭೂಮಿಯಲ್ಲಿ ಬೆಳೆ ಬೆಳೆದು ಜಿಲ್ಲೆಗೇ ಮಾದರಿ ಎನಿಸಿದ್ದಾನೆ.

ಶ್ರೀಗಂಧ, ಮಲಡೋಬಿಯಾ ಗಿಡದಲ್ಲಿ ಕೋಳಿ ಸಾಕಣಿಕೆ. ನಾಟಿ ಕೋಳಿ ಸಾಕಣಿಕೆಯಿಂದ ಪ್ರತಿದಿನ ಸಾವಿರಾರು ರೂಪಾಯಿ ಆದಾಯ ಪಡೆಯುವ ಮೂಲಕ ಯಾವ ಉದ್ಯಮಕ್ಕೂ ಕೃಷಿ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ‌.

ಹೌದು, ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕೇಸರ ತುಂಗಾವ್ ಗ್ರಾಮದ ಪಂಡಿತ್ ಕೋಲೇಕಾರ್ ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಬರಗಾಲದಲ್ಲಿ ನಿರಂತರ ಆದಾಯ ಗಳಿಸಿ ಜಿಲ್ಲೆಯ ರೈತರ ಗಮನ ಸೆಳೆದಿದ್ದಾರೆ.

ಮಾದರಿ ರೈತ

ಸಮಗ್ರ ಬೇಸಾಯದ ಮೂಲಕ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆಯುತ್ತಿರುವ ಪಂಡಿತ್ ಓದಿದ್ದು ಬಿಎ ಪದವಿಯಾದರೂ ಸರ್ಕಾರಿ ಕೆಲಸಕ್ಕೆ ಆಸೆ ಪಡದೆ ತಮ್ಮ ಜಮೀನಿನಲ್ಲಿ ಸಮಗ್ರ ಬೇಸಾಯ ಪದ್ಧತಿಯಲ್ಲಿ ತೋಟಗಾರಿಕೆ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ರೈತ ಪಂಡಿತ್ ತಮ್ಮ 2 ಎಕರೆ ಜಮೀನಿನಲ್ಲಿ ಶ್ರೀಗಂಧ ಹಾಗೂ ಮಲಡೋಬಿಯಾ ಗಿಡಗಳನ್ನ ನೆಟ್ಟು ನಾಲ್ಕು ವರ್ಷ ಕಳೆದಿದೆ. ಇನ್ನೂ 10 ವರ್ಷಗಳ ಕಾಲ ಬಿಟ್ಟರೆ 2 ರಿಂದ 3 ಕೋಟಿ ರೂಪಾಯಿ ಆದಾಯ ಗಳಿಸಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಶ್ರೀಗಂಧಕ್ಕೆ ಹೆಚ್ಚಿಗೆ ನೀರು ಬೇಕಾಗುವುದಿಲ್ಲ. ಸ್ವಲ್ಪ ನೀರು ಕೊಟ್ಟರೆ ಸಾಕು. ಈ ಹಿಂದೆ ಶ್ರೀಗಂಧದ ಮರಗಳನ್ನು ಯಾವುದೇ ಪ್ರದೇಶದಲ್ಲಿ ಬೆಳೆದರೂ ಅದು ಸರ್ಕಾರದ ಸ್ವತ್ತಾಗಿರುತ್ತಿತ್ತು. ಆದರೆ, ಕರ್ನಾಟಕ ಅರಣ್ಯ ಕಾಯ್ದೆ 2001 ಸೆಕ್ಷನ್ 83ರ ಪ್ರಕಾರ ಯಾರ ಜಮೀನಿನಲ್ಲಿ ಶ್ರೀಗಂಧದ ಮರವಿರುತ್ತೋ ಅದು ಜಮೀನು ಮಾಲೀಕನ ಸ್ವತ್ತು ಎಂದು ತಿದ್ದುಪಡಿ ಮಾಡಿದೆ. ಇದರಿಂದ ರೈತರು ಯಾವುದೇ ಆತಂಕವಿಲ್ಲದೆ ಶ್ರೀಗಂಧ ಬೆಳೆಯಬಹುದು ಎನ್ನುತ್ತಾರೆ ರೈತರು.

ಮತ್ತೊಂದು ವಿಚಾರವೆಂದರೇ ಪಂಡಿತ್ ಕೊಲೇಕಾರ ಶ್ರೀಗಂಧದ ಜೊತೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಇದರಿಂದ ಕೋಳಿಯ ಮೊಟ್ಟೆ ಹಾಗೂ ಕೋಳಿ ಮಾರಾಟದಿಂದ ತಿಂಗಳಿಗೆ ಸಾವಿರಾರು ರೂಪಾಯಿ ಎಣಿಸುತ್ತಿದ್ದಾರೆ. ಇದರ ಜೊತೆಗೆ ಮಿಶ್ರ ತೋಟಗಾರಿಕೆಯ ಪಪ್ಪಾಯಿ, ಪೇರಲ, ಲಿಂಬು, ಚಿಕ್ಕು ಬೆಳೆಯುತ್ತಿದ್ದು ಇದರಿಂದಲೂ ಸಾಕಷ್ಟು ಹಣ ಬರುತ್ತಿದೆ. ಕಡಿಮೆ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆಯುವುದರ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಂದೊಂದು ಋತುವಿನಲ್ಲಿ ಒಂದೊಂದು ಫಸಲು ಬರುತ್ತದೆ. ವರ್ಷವಿಡಿ ಕೈಯಲ್ಲಿ ಹಣ ಓಡಾಡುತ್ತದೆ ಅಂತಾರೆ ರೈತ ಪಂಡಿತ್.

ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ಧತಿಯನ್ನ ಅಳವಡಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯವನ್ನು ಹೇಗೆ ಗಳಿಸಬಹುದೆಂದು ತಿಳಿಸಿಕೊಡುವ ಮೂಲಕ ಯುವ ರೈತ ಪಂಡಿತ್ ಜಿಲ್ಲೆಗೆ ಮಾದರಿ ರೈತನಾಗಿ ನಿಂತಿದ್ದಾರೆ.

ABOUT THE AUTHOR

...view details