ಕರ್ನಾಟಕ

karnataka

ETV Bharat / state

ಗ್ರಾಮ ವಾಸ್ತವ್ಯದಿಂದ ಬದಲಾವಣೆ ಪರ್ವ... ಅನುಭವ ಬಿಚ್ಚಿಟ್ಟ ಸಿಎಂ!

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೊರತುಪಡಿಸಿ ಹಲವಾರು ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ

By

Published : Jun 28, 2019, 1:29 PM IST

ಬೀದರ್: ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಗ್ರಾಮೀಣ ಭಾಗದ ಶೇ.70% ಬದಲಾವಣೆಯಾಗಲಿದ್ದು, ಇದರಿಂದ ಸಣ್ಣ ಅಧಿಕಾರಿಯಿಂದ ಹಿಡಿದು ಜಿಲ್ಲಾಮಟ್ಟದ ಅಧಿಕಾರಿಗಳವರೆಗೆ ಹೊಸ ಅನುಭವ ಆಗಲಿದೆ. ಜನರ ನೋವಿಗೆ ಸ್ಪಂದನೆ ಸಿಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಇಂದು ಬೆಳಗ್ಗೆ ಬೆಂಗಳೂರಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಜನರ ಮುಂದೆ ಆಡಳಿತ ಹೋದಾಗ ಜನರ ಕಷ್ಟಗಳು ಅರ್ಥವಾಗಲಿವೆ. ಈ ನಿಟ್ಟಿನಲ್ಲಿ 2006 ರಲ್ಲಿ ಮಾಡಿದ್ದ ಗ್ರಾಮ ವಾಸ್ತವ್ಯಕ್ಕಿಂತ ಈಗಿನ ಕಾರ್ಯಕ್ರಮ ಸಾಕಷ್ಟು ಪ್ರಭಾವ ಬೀರಲಿದೆ ಅನ್ನೋ ವಾತಾವರಣ ಕಂಡು ಬರುತ್ತಿದೆ ಎಂದರು.

ಕೃಷಿ ಪದ್ಧತಿಯಲ್ಲಿ ಬದಲಾವಣೆ

ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಬಂಜರು ಭೂಮಿಯಲ್ಲಿ ಬಂಗಾರದಂತಹ ಇಳುವರಿ ಪಡೆಯುತ್ತಿರುವ ಮಹಾರಾಷ್ಟ್ರದ ಮರಾಠವಾಡ ವ್ಯಾಪ್ತಿಯ ಕಡವಂಚಿ ಗ್ರಾಮದ ಅಭಿವೃದ್ಧಿ ಮಾದರಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ರಾಜ್ಯದಲ್ಲೂ ಕೂಡ ಜಾರಿಗೊಳಿಸಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.

ಮಹಾರಾಷ್ಟ್ರದ ಮರಾಠವಾಡದ ಹಳ್ಳಿಯು ನಮಗೆ ಮಾದರಿಯಾಗಬೇಕಿದೆ. ಅಲ್ಲಿನ ಬದಲಾವಣೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ಬರಗಾಲದಲ್ಲೂ ಅಲ್ಲಿನ ಜನ ನೀರು ಉಳಿಸಿಕೊಂಡಿದ್ದಾರೆ‌. ಅವರ ಆದಾಯದ ಪ್ರಮಾಣ ಹೆಚ್ಚಾಗಿದೆ. ಅಂತಹ ವಾತಾವರಣವನ್ನು ಇಲ್ಲಿ ಕೂಡ ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೊರತುಪಡಿಸಿ ಹಲವಾರು ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಘೋಷಿಸಿದರು. ಇಡೀ ರಾಜ್ಯದ 30 ಜಿಲ್ಲೆಗಳಲ್ಲಿ ಆಯಾ ಭಾಗದಲ್ಲಿ ಒಂದೊಂದು ಹಳ್ಳಿಯನ್ನು ಆಯ್ಕೆಮಾಡಿಕೊಂಡು ನಾವೇ ಖುದ್ದು ಸರ್ಕಾರದ ಮೂಲಕ ಅವರಿಗೆ ತಿಳುವಳಿಕೆ ಕೊಡುವ ಕಾರ್ಯಕ್ರಮ ರೂಪಿಸುತ್ತೇವೆ. ಕಡವಂಚಿ ಗ್ರಾಮದ ಜಲಕ್ರಾಂತಿಯ ಮಾದರಿಯನ್ನು ಇಲ್ಲಿನ ಜನರಿಗೆ ತಿಳಿಸುತ್ತೇವೆ. ಈ ಮೂಲಕ ಆ ಹಳ್ಳಿಯ ರೈತರ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಬರೀ ಸರ್ಕಾರದಿಂದ ಕಾರ್ಯಕ್ರಮ ಕೊಟ್ಟರೆ ಆಗುವುದಿಲ್ಲ. ಜನರ ಪಾಲ್ಗೊಳ್ಳುವಿಕೆ ಕೂಡ ಮುಖ್ಯ. ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ವಿಷಯದಲ್ಲಿ ರೈತರಿಗೆ ಮಾದರಿಯಾಗಲಿ ಎನ್ನುವ ಕಾರಣಕ್ಕೆ ವಾರ್ತಾ ಇಲಾಖೆಯಿಂದ ಮಹಾರಾಷ್ಟ್ರದ ಮರಾಠವಾಡದ ಕಡವಂಚಿ ಹಳ್ಳಿಯ ಜಲಕ್ರಾಂತಿಯ ಚಿತ್ರಣದ ವಿಡಿಯೋವನ್ನು ತೋರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಯಾವ ಹಳ್ಳಿಯಲ್ಲಿ ನೂರು ಜನರ ಕೋ ಆಪರೇಟಿವ್ ಫಾರ್ಮ್​ ಮಾಡಿಕೊಳ್ಳುತ್ತಾರೋ ಅವರಿಗೆ ಒಂದು ಕೋಟಿ ರೂ. ಸಬ್ಸಿಡಿಯನ್ನು ಸರ್ಕಾರದಿಂದ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಅಧಿಕಾರಿಗಳಿಗೂ ಹೊಸ ಅನುಭವ

ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಅಧಿಕಾರಿಗಳಿಗೆ ಒಂದು ಹೊಸ ಅನುಭವ ಕೊಡುತ್ತದೆ. ಪೊಲೀಸ್ ಸಿಬ್ಬಂದಿಯಿಂದ ಜಿಲ್ಲಾಧಿಕಾರಿವರೆಗೆ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆವರೆಗೆ ಜನರ ಜೊತೆಗಿದ್ದು ತಾಳ್ಮೆಯಿಂದ ಜನರ ಸಮಸ್ಯೆ ಆಲಿಸುವುದನ್ನು, ಜನರು ಬದಲಾವಣೆ ಆಗುವುದನ್ನು ನಾನು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಾಣುತ್ತಿದ್ದೇನೆ. ಈ ಗ್ರಾಮವಾಸ್ತವ್ಯ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಸ್ಪಂದಿಸುವಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಯಾದಗಿರಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಾಡಿದ ಗ್ರಾಮ ವಾಸ್ತವ್ಯದಲ್ಲಿ ಬಂದ ಮನವಿಗಳ ಪೈಕಿ ಆಯಾ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳು ಕೆಲವು ಇವೆ. ಸಾವಿರಾರು ಜನರು ಕುಟುಂಬದಲ್ಲಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆಯೂ ನಾವು ಗಮನ ಕೊಡುತ್ತೇವೆ ಎಂದು ಸಿಎಂ ಅಭಯ ನೀಡಿದರು.

ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಿಎಂ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ತಾಯಿ ಹೃದಯದಿಂದ ಕೆಲಸ ಮಾಡಿರುವುದು ಕೂಡ ನಮ್ಮ ಬಲವಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ಕಚೇರಿಯಿಂದ ನೇರವಾಗಿ ಸೌಕರ್ಯ ಸಿಗಲಿದೆ ಎಂದರು.

2006ರಲ್ಲಿ ಇಷ್ಟು ದೊಡ್ಡಮಟ್ಟದ ಗ್ರಾಮ ವಾಸ್ತವ್ಯ ನಡೆದಿರಲಿಲ್ಲ. ಈ ಹಿಂದೆ ನಾವು ಹಳ್ಳಿಗೆ ಹೋಗೋದೇ ರಾತ್ರಿ 1 ಗಂಟೆಯಾಗುತ್ತಿತ್ತು. ಬರೀ ಅಧಿಕಾರಿಗಳೇ ಅರ್ಜಿ ಪಡೆಯುತ್ತಿದ್ದರು. ಈ ಹಿಂದೆ ನಡೆಸಿದ್ದ ಗ್ರಾಮವಾಸ್ತವ್ಯ ವೇಳೆ ಪರಿಹಾರ ಪಡೆದುಕೊಂಡವರು ಅದನ್ನು ಈಗಲೂ ನೆನಪಿಸುವುದು ಈಗಿನ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಗೊತ್ತಾಗಿದೆ ಎಂದು ಸಿಎಂ ಕುಮಾರಸ್ವಾಮಿ ಸ್ಮರಿಸಿದರು.

ABOUT THE AUTHOR

...view details