ಬಸವಕಲ್ಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ರಥ ಮೈದಾನದಲ್ಲಿ ನಾಳೆ ನಡೆಯಬೇಕಿದ್ದ ಸಾರ್ವಜನಿಕ ಬೃಹತ್ ಬಹಿರಂಗ ಸಮಾವೇಶ ತಾಲೂಕು ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾದ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಗರದ ರಥ ಮೈದಾನದಲ್ಲಿ ಫೆ.23 ರಂದು ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಬೃಹತ್ ಬಹಿರಂಗ ಸಮಾವೇಶಕ್ಕೆ ಭಾರೀ ಸಿದ್ಧತೆಗಳು ನಡೆಯುತ್ತಿರುವಾಗಲೇ ಸಮಾವೇಶ ನಡೆವ ಸ್ಥಳಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸರಣಿ ಸಭೆ ನಡೆಸಿದ ಆಯೋಜಕರು, ನಗರದ ರಥ ಮೈದಾನದ ಬದಲಾಗಿ ಸಸ್ತಾಪೂರ ಬಂಗ್ಲಾ ಸಮೀಪದ ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸುವ ಮೂಲಕ ಸಮಾವೇಶದ ಕುರಿತು ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಯಶಸ್ವಿಯಾಗದ ಸಂಧಾನ ಸಭೆ: ಸಿಎಎ, ಎನ್‌ಆರ್‌ಸಿ ವಿರುದ್ಧ ನಾಳೆ ನಡೆಯಲಿರುವ ಸಮಾವೇಶ ಕ್ರೀಡಾಂಗಣಕ್ಕೆ ಶಿಫ್ಟ್...! ಇಂದು ಬೆಳಗ್ಗೆ 11:30ರ ಸುಮಾರಿಗೆ ಬಿಡಿಪಿಸಿ ಕಾರ್ಯಾಲಯದಲ್ಲಿ ಜಂಟಿ ಕ್ರಿಯಾ ಸಮಿತಿ ಪ್ರಮುಖರು, ಬಿಡಿಪಿಸಿ ಅಧ್ಯಕ್ಷ ರಗಟೆ ಸೇರಿದಂತೆ ಕೆಲ ಪದಾಧಿಕಾರಿಗಳನ್ನು ಭೇಟಿ ಮಾಡಿ, ಮನವೊಲಿಸುವ ಪ್ರಯತ್ನ ಮಾಡಿದರು. ಸಮಾವೇಶ ನಡೆಸುವ ಬಗ್ಗೆ 15 ದಿನಗಳ ಹಿಂದೆಯೇ ತೀರ್ಮಾನಿಸಿ ರಥ ಮೈದಾನ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳು ಕೂಡಾ ಬಹುತೇಕ ಪೂರ್ಣಗೊಳಿಸಲಾಗಿದೆ. ಆದರೆ, ದಿಢೀರ್ ಸ್ಥಳದ ಅನುಮತಿ ರದ್ದುಗೊಳಿಸಿದ ನಿರ್ಧಾರದಿಂದಾಗಿ ಗೊಂದಲ ಸೃಷ್ಟಿಯಾಗಿದೆ. ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖಂಡ ಅಸ್ಲಮ್ ಜನಾಬ್, ಮುಜಾಹಿದ್ ಪಾಶಾ ಖುರೇಶಿ, ಅಜರಲಿ ನವರಂಗ ಸೇರಿದಂತೆ ಕೆಲ ಪ್ರಮುಖರು ಮಾತನಾಡಿ ಮನವಿ ಮಾಡಿದರು. ಪ್ರಮುಖರ ಸಲಹೆ ಆಲಿಸಿದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಸೇರಿದಂತೆ ಇತರ ಪದಾಧಿಕಾರಿಗಳು ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಮಾವೇಶ ನಡೆಸಲಿದ್ದಾರೆ ಎಂದು ಶಾಸಕರು ಬರೆದ ಪತ್ರದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿತ್ತು ಎಂದರು.
ಸಿಎಎ, ಎನ್‌ಆರ್‌ಸಿ ವಿರುದ್ಧ ಸಮಾವೇಶಕ್ಕೆ ನಾವು ಅನುಮತಿ ನೀಡಿರಲಿಲ್ಲ. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಸಮಾವೇಶ ನಡೆಸಲು ರಥ ಮೈದಾನದ ಸ್ಥಳ ನೀಡಿದ್ದಕ್ಕಾಗಿ ನಮ್ಮ ಸಮಾಜದ ಕೆಲ ಯುವಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ಸಮಾವೇಶ ಆಯೋಜಕರ ಮನವಿ ತಿರಸ್ಕರಿಸಿದರು. ಈ ಬಗ್ಗೆ ಮಧ್ಯಾಹ್ನದವರೆಗೆ ಮತ್ತೊಮ್ಮೆ ಸಭೆ ನಡೆಸಿ, ನಿರ್ಧಾರ ತಿಳಿಸಲಾಗುವುದು ಎಂದು ಹೇಳುವ ಮೂಲಕ ಸಭೆ ಅಂತ್ಯಗೊಳಿಸಿದರು.
ಮಧ್ಯಾಹ್ನ 3ರ ವರೆಗೆ ಬಿಡಿಪಿಸಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಇಲ್ಲಿಯ ರಾಜಬಾಗ ಸವಾರ ದರ್ಗಾದಲ್ಲಿ ಶಾಸಕ ಬಿ.ನಾರಾಯಣರಾವ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಿದ ಜಂಟಿ ಕ್ರಿಯಾ ಸಮಿತಿ ಪ್ರಮುಖರು, ರಥ ಮೈದಾನದ ಬದಲಾಗಿ ಸಸ್ತಾಪೂರ ಬಂಗ್ಲಾ ಸಮಿಪದ ತಾಲೂಕು ಕ್ರಿಡಾಂಗಣದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದರು.