ಬೀದರ್:ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಹುಮಾಬಾದ್ ಪಟ್ಟಣದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರಗೆ ಚಾಲನೆ ನೀಡಿ ಮಾತನಾಡಿದ ಅವರು 104 ಸ್ಥಾನ ಬಲ ಹೊಂದಿದ್ದರು ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿರುವ ಸಮಿಶ್ರ ಸರ್ಕಾರ ಪತನವಾಗುತ್ತದೆ. ಇದಕ್ಕಾಗಿ ಕಾರ್ಯಕರ್ತರು ಶ್ರಮಿಸುವಂತೆ ಹೇಳಿದರು.
ನನ್ನನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಸೊನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರಾಜ್ಯದ ಜನ ಅಲ್ಲಎಂದುಸಿಎಂ ಅಂದಿದ್ದರು. 37 ಸ್ಥಾನಗಳಲ್ಲಿ ಗೆದ್ದವನು ನಾನು, ನೀವು ನನಗೆ ಏನು ಕೇಳಬೇಡಿ ಎಂದು ನೇರವಾಗಿ ಹೇಳುವ ಮೂಲಕ ರಾಜ್ಯದ ಜನರಿಗೆ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ರೈತರ ಸಾಲಮನ್ನಾ ಮಾಡ್ತಿನಿ ಎಂದು ಹೇಳಿ ನೀರಾವರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ಅಭಿವೃದ್ಧಿ ಯೋಜನೆಗಳ ಅನುದಾನ ತಡೆದು ಅಭಿವೃದ್ಧಿ ನೆನಗುದಿಗೆ ಬಿಳುವ ಹಾಗೆ ಮಾಡಿದ್ದಾರೆ. ಸಾಲಮನ್ನಾನೂ ಸರಿಯಾಗಿ ಮಾಡಿಲ್ಲ ಎಂದು ದೂರಿದರು.
ಮಹಾರಾಷ್ಟ್ರ, ತಮಿಳನಾಡು, ಬಿಹಾರ ಹೀಗೆ ದೇಶದೆಲ್ಲೆಡೆ ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದ 300ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ. ಸೂರ್ಯ, ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದು ಅಷ್ಟೇ ಸತ್ಯ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜೋರಾಗಿ ಅಭಿಯಾನ ಮಾಡಬೇಕಿದೆ. ಪ್ರತಿ ಬೂತ್ನಲ್ಲಿ ಶೇ.50 ರಿಂದ 60 ರಷ್ಟು ಮತ ಪಡೆಯಬೇಕು. ಇದಕ್ಕಾಗಿ ಬೂತ್ ಮಟ್ಟದ ಕಾರ್ಯಕರ್ತರು, ಮುಖಂಡರು ಇನ್ನೆರಡು ತಿಂಗಳುಗಳ ಕಾಲ ಹಗಲು ರಾತ್ರಿ ಶ್ರಮ ಪಡಬೇಕು ಎಂದರು.
ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವ ಪುರುಷೋತ್ತಮ ರುಪಾಲ್, ಮಾಜಿ ಸಿಎಂ ಜಗದೀಶ ಶಟ್ಟರ್, ಮಾಜಿ ಡಿಸಿಎಂ ಆರ್.ಅಶೋಕ, ಗೊವಿಂದ ಕಾರಜೋಳ, ಸಂಸದ ಭಗವಂತ ಖೂಬಾ, ಶಾಸಕರಾದ ಪ್ರಭು ಚವ್ಹಾಣ, ಸುಭಾಷ ಗುತ್ತೆದಾರ, ರಘುನಾಥ ಮಲ್ಕಾಪೂರೆ, ಮಾಜಿ ಶಾಸಕ ಸುಭಾಷ ಕಲ್ಲೂರ, ರಾಜೇಂದ್ರ ವರ್ಮಾ ಹಾಗೂ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೇಲ್ದಾಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.