ಬಸವಕಲ್ಯಾಣ:ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಬಸವಾದಿ ಶರಣರ ಅನುಭವ ಮಂಟಪ ನಿರ್ಮಾಣ ಯೋಜನೆಯ ಸ್ವರೂಪ ಪರಿಷ್ಕರಣೆ, ಅಯೋಧ್ಯೆಯ ರಾಮ ಮಂದಿರ ಯೋಜನೆ ಮಾದರಿಯಲ್ಲಿ ಅನುಷ್ಠಾನವೆಂದರೆ ಅದು ಹೇಗೆ ಎಂಬುದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ, ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ ಅವರು ಸ್ಪಷ್ಟಪಡಿಸಬೇಕು ಎಂದು ಇಲ್ಲಿಯ ಬಸವ ಮಹಾಮನೆ ಸಂಸ್ಥೆ ಅಧ್ಯಕ್ಷರಾದ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅನುಭವ ಮಂಟಪದ ನಿರ್ಮಾಣ ಯೋಜನೆಯ ಸ್ವರೂಪ ಪರಿಷ್ಕರಣೆ ಆಗಲಿದೆ, ರಾಮ ಮಂದಿರದ ಯೋಜನೆ ಸ್ಪರ್ಶ ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. ಸೇಡಂ ಅವರ ಮನವಿಯಂತೆ ಮುಖ್ಯಮಂತ್ರಿಗಳು ತಕ್ಷಣ ಒಪ್ಪಿದ್ದಾರೆಂದು ತಿಳಿದು ಬಂದಿದೆ ಎಂದು ಪ್ರಕಟಣೆಯಲ್ಲಿ ಬೆಲ್ದಾಳ ಶರಣರು ತಿಳಿಸಿದ್ದಾರೆ.