ಬೀದರ್: ಈಶಾನ್ಯ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ, ಬಳಿಕ ಕಂಡಕ್ಟರ್ ಮೇಲೆ ದೂರು ನೀಡಿದ್ದ ಯುವಕರ ವಿರುದ್ಧ ಸಾರಿಗೆ ಸಂಸ್ಥೆ ನೌಕರರು ಆಕ್ರೋಶಗೊಂಡು, ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟಿಸಿದರು.
ಬೀದರ್- ಚಿಟ್ಟಾ ಮಾರ್ಗದಲ್ಲಿ ಬೀದರ್ ಘಟಕದ ಬಸ್ ಕಂಡಕ್ಟರ್ ಮುದಸೀರ್ ಕಾರ್ಯನಿರ್ವಹಿಸುವಾಗ ಬಸ್ನಲ್ಲಿದ್ದ ಯುವಕರ ಗುಂಪು ಕ್ಷುಲಕ ಕಾರಣಕ್ಕೆ ಜಗಳ ತೆಗೆದು ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಹಲ್ಲೆ ಮಾಡಿದ ಯುವಕರೇ ನ್ಯೂಟೌನ್ ಪೊಲೀಸ್ ಠಾಣೆಗೆ ಹೋಗಿ, ಕಂಡಕ್ಟರ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರಿಗೆ ಸಂಸ್ಥೆ ನೌಕರರು ಇಂದು ಮಧ್ಯಾಹ್ನದಿಂದ ಬೀದರ್ ನಗರದ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ರೋಡಿಗೆ ಇಳಿಸದೆ ಪ್ರತಿಭಟಿಸಿದರು. ನಮಗೆ ನ್ಯಾಯ ಕೊಡುವವರೆಗೆ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ ಸ್ಥಳಕ್ಕೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿ ಭೇಟಿ ನೀಡಿ ನೌಕರರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು. ಕಂಡಕ್ಟರ್ ಮೇಲೆ ದಾಖಲಿಸಿದ ಸುಳ್ಳು ಜಾತಿ ನಿಂದನೆ ಪ್ರಕರಣ ವಾಪಸ ಪಡೆಯಬೇಕು. ಅಲ್ಲದೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯಿಂದ ಪ್ರಯಾಣಿಕರು ಪರದಾಡುವಂತಾಗಿದ್ದು, ಶಾಲಾ ಕಾಲೇಜು ಪಾಸ್ ಹೊಂದಿರುವ ವಿಧ್ಯಾರ್ಥಿಗಳು ಬಸ್ ಇಲ್ಲದೇ ಕಂಗಾಲಾಗಿದ್ದರು.