ಬೀದರ್/ಬಸವಕಲ್ಯಾಣ:ದಸರಾ ಹಬ್ಬದ ವೇಳೆಯಲ್ಲಿ ಜಿಲ್ಲೆಯ ಅಂದಾಜು 600ಕ್ಕೂ ಅಧಿಕ ಹಳ್ಳಿಗಳಿಂದ ಭಕ್ತರು ಪಾದಯಾತ್ರೆ ಮೂಲಕ ತುಳಜಾ ಭವಾನಿ ದರ್ಶನಕ್ಕೆ ಹೋಗುತ್ತಾರೆ. ಜಿಲ್ಲಾ ಕೇಂದ್ರದಿಂದ 22 ಕಿಲೋ ಮೀಟರ್ನಷ್ಟು ದೂರದ ತುಳಜಾಪುರಕ್ಕೆ ಭಕ್ತರು ಕಾಲ್ನಡಿಗೆ ಮೂಲಕ ಹೋಗೋದು ಸಾಹಸವೇ ಸರಿ.
ತುಳಜಾ ಭವಾನಿದೇವಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಸಾವಿರಾರು ಭಕ್ತರು ಬೀದರ್ ಜಿಲ್ಲೆಯಷ್ಟೆ ಅಲ್ಲ, ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ತೆಲಂಗಾಣದಿಂದಲೂ ಸುಮಾರು 50 ಸಾವಿರಕ್ಕೂ ಅಧಿಕ ಜನ ಭಕ್ತರು ಪಾದಯಾತ್ರೆ ಮೂಲಕವೇ ತುಳಜಾಪೂರಕ್ಕೆ ತೆರಳಿ ದೇವಿ ದರ್ಶನ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಬರಿಗಾಲಲ್ಲಿ ಸುಡುವ ಟಾರು ರಸ್ತೆಯಲ್ಲಿ ನಡೆದಾಟ, ಮರ- ಗಿಡದ ಬುಡದಲ್ಲಿ ಊಟ, ದಾರಿ ನಡುವೆ ದೇವಸ್ಥಾನ ಸಿಕ್ಕರೆ ವಿಶ್ರಾಂತಿ, ಇದು ದೇವಿ ದರ್ಶನಕ್ಕೆ ಹೋಗುವ ಭಕ್ತರ ದಿನಚರಿ. ನಾಲ್ಕೈದು ದಿನಗಳ ಅವಧಿಯಲ್ಲಿ ತುಳಜಾಪೂರದ ದೇವಿ ಮಂದಿರ ತಲುಪುವ ಭಕ್ತರು ದಿನವೊಂದಕ್ಕೆ ಸುಮಾರು 40 ಕಿಲೋ ಮೀಟರ್ ನಡೆಯುತ್ತಾರೆ.
ದಾರಿಯುದ್ದಕ್ಕೂ ಭಜನೆ, ಗಾಯನ, ತಾಯಿ ಅಂಬಾ ಭವಾನಿ ಸ್ಮರಣೆ ನಡೆಯುತ್ತವೆ. ದಾಸೋಹ ತತ್ವ ಬೆಳೆಸಿದ್ದ ಶರಣರ ಅನ್ನದಾಸೋಹ ಇಲ್ಲಿ ಅಕ್ಷರಶಃ ಪಾಲನೆಯಾಗುತ್ತಿದೆ. ಭಕ್ತರ ಅನುಕೂಲಕ್ಕೆ ವಿವಿಧ ಗ್ರಾಮಸ್ಥರು, ಸಂಘಟಕರು ಹಾಗೂ ಉದ್ಯಮಿಗಳು ದಾರಿ ಮಧ್ಯೆ ಅನ್ನದಾಸೋಹ , ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಾರೆ. ಹಲವಾರು ವರ್ಷಗಳಿಂದ ಪಾದಯಾತ್ರೆ ನಡೆದುಕೊಂಡು ಬಂದಿದ್ದು, ದೇವಿ ದರ್ಶನಕ್ಕೆ ಹೋಗುವುದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ತುಳಜಾಪೂರಕ್ಕೆ ಪಾದಯಾತ್ರೆ ಮೂಲಕ ಒಂದು ವರ್ಷ ಹೋದವರು ಸತತ ಮೂರು ವರ್ಷ ಹೋಗಬೇಕು ಎಂಬ ನಂಬಿಕೆಯೂ ಇದೆ. ತಮ್ಮ ಹರಕೆ ಈಡೇರಿದವರು ದಸರಾ ಹಬ್ಬದ ಸಂದರ್ಭದಲ್ಲಿ ಕಾಲ್ನಡಿಗೆ ಮೂಲಕ ತುಳಜಾಪೂರಕ್ಕೆ ತೆರಳಿ ದೇವಿ ದರ್ಶನ ಮಾಡಿ ಹರಕೆ ತೀರಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ-65ರ ಮಾರ್ಗದಿಂದ ತುಳಜಾಪೂರಕ್ಕೆ ಪಾದಯಾತ್ರೆ ಮೂಲಕ ತೆರಳುವ ಪಾದಯಾತ್ರಿಗಳು ಜಾಗ್ರತೆ ವಹಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಸದಾ ವಾಹನಗಳ ಓಡಾಟ ಇದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಭಕ್ತರು ಅತ್ಯಂತ ಎಚ್ಚರಿಕೆ ವಹಿಸಬೇಕಾಗುತ್ತದೆ. ಭಕ್ತರ ಪಾದಯಾತ್ರೆ ಸುರಕ್ಷತೆ ದೃಷ್ಠಿಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಂಚಾರಿ ಪೊಲೀಸರು ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ಬಹುಪಾಲು ಭಕ್ತರ ಆಶಯವಾಗಿದೆ.
ಒಟ್ಟಿನಲ್ಲಿ ಧಾರ್ಮಿಕತೆ, ದೈವಭಕ್ತಿಯ ಪರಾಕಾಷ್ಠೆ ಬಗ್ಗೆ ಅಲ್ಲಲ್ಲಿ ಮೌಢ್ಯತೆ ಎಂಬ ಪದ ಬಳಕೆ ಚಾಲ್ತಿಯಲ್ಲಿದ್ದರೂ ಕೂಡ ಆಧುನಿಕ ಸಮಾಜದಲ್ಲಿ ದೇವರೆಡೆಗಿನ ಭಯಭಕ್ತಿ ಮಾತ್ರ ಬದಲಾಗಿಲ್ಲ. ಇದಕ್ಕೆ ತುಳಜಾಪುರ ದೇವಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುವ ಭಕ್ತರ ಸಾಲೇ ಸಾಕ್ಷಿ.