ಬಸವಕಲ್ಯಾಣ (ಬೀದರ್):ನಗರ ಸೇರಿದಂತೆ ತಾಲೂಕಿನಲ್ಲಿ ಕೊರೊನಾ ಕಾಟ ಮುಂದುವರೆದಿದ್ದು, ಶನಿವಾರ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ತಾಲೂಕಿನಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 190ಕ್ಕೆ ತಲುಪಿದೆ.
ತಾಲೂಕಿನ ಗುಣತೀರ್ಥ ವಾಡಿಯ 52 ವರ್ಷದ ವ್ಯಕ್ತಿ ಹಾಗೂ ಹತ್ಯಾಳ ತಾಂಡಾದ 16 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಈ ಇಬ್ಬರು ಸೋಂಕಿತರಿಗೆ ಮಹಾರಾಷ್ಟದ ಸಂಪರ್ಕದಿಂದಲೇ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಕ್ವಾರಂಟೈನ್ ಅವಧಿ ಮುಗಿದು ಮನೆಗೆ ತೆರಳಿದ ಹತ್ಯಾಳ ತಾಂಡಾದ ವ್ಯಕ್ತಿಗೆ ಸೋಂಕು ಧೃಡಪಟ್ಟಿದ್ದು, ಆದರೆ ಸೋಂಕಿತನಿಗೆ ಆಸ್ಪತ್ರೆಗೆ ಸಾಗಿಸಲು ಆರೋಗ್ಯ ಇಲಾಖೆ ವೈದ್ಯರು ಹರ ಸಾಹಸಪಟ್ಟರು. ಕ್ವಾರಂಟೈನ್ ಅವಧಿ ಮುಗಿದ ಮೇಲೆ ವರದಿ ಬಂದಿರುವುದು ಯಾಕೆ? ಅದು ನಮ್ಮ ತಾಂಡಾದ ಯುವಕನದ್ದೆ ವರದಿ ಎನ್ನುವುದಕ್ಕೆ ಯಾವ ಪುರಾವೆ ನಿಮ್ಮ ಬಳಿ ಇದೆ ಎಂದು ಪ್ರಶ್ನಿಸಿದ ಸ್ಥಳೀಯರು, ಯಾವುದೇ ಕಾರಣಕ್ಕೂ ಯುವಕನಿಗೆ ಆಸ್ಪತ್ರೆಗೆ ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಬೆಳಗ್ಗೆಯಿಂದ ಸಂಜೆವರೆಗೆ ಸ್ಥಳೀಯರೊಂದಿಗೆ ನಿರಂತರ ಸಂಕರ್ಪದಲಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಜನರ ಮನವೊಲಿಸಿ ಯುವಕನಿಗೆ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು.