ವಿಜಯನಗರ:ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿ ಹಾಗೂ ಆತನ ಕುಟುಂಬಸ್ಥರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಬಣವಿಕಲ್ ಗ್ರಾಮದಲ್ಲಿ ಘಟನೆ ನಡೆದಿದೆ.
ಹೀನಾ ಬಾನು (23) ಕೊಲೆಯಾದ ಮಹಿಳೆ. ಇವರು ಕಳೆದ ಎರಡು ವರ್ಷಗಳ ಹಿಂದೆ ಬಣವಿಕಲ್ ಗ್ರಾಮದ ಜಾಫರ್ ಸಾಧಿಕ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಏಳು ತಿಂಗಳ ಮಗು ಇದೆ.
ಕುಟುಂಬಸ್ಥರ ಆರೋಪವೇನು?: ನಮ್ಮ ಮಗಳು ಪ್ರೀತಿಸಿದ್ದರಿಂದ ಜಾಫರ್ ಸಾಧಿಕ್ ಜತೆ ಮದುವೆ ಮಾಡಿದ್ದೆವು. ಆದರೆ ಮದುವೆಯದಾಗಿನಿಂದ ಪತಿ ಹಾಗೂ ಆತನ ಕುಟುಂಬಸ್ಥರು ಆಗಾಗ ಜಗಳ ತೆಗೆದು ನಮ್ಮ ಮನೆಯ ಶ್ರೀಮಂತಿಕೆ ನೋಡಿ ಪ್ರೀತಿಸಿ ಮದುವೆಯಾಗಿದ್ದೀಯಾ. ನೀನು ನಮ್ಮ ಮನೆಯ ಘನತೆಗೆ ತಕ್ಕ ಸೊಸೆಯಲ್ಲ ಎಂದು ನಿಂದಿಸುತ್ತಿದ್ದರು.
ಬೇರೊಂದು ಮದುವೆ ಮಾಡುವ ಉದ್ದೇಶದಿಂದ ನಿನ್ನೆ ಜಗಳ ತೆಗೆದು ಕತ್ತು ಹಿಸುಕಿ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಹೀನಾಬಾನು ತಾಯಿ ಆಸಿಫ್ ಬಾನು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಜಾಫರ್ ಸಾಧಿಕ್, ತಂದೆ ರಾಜಾಸಾಬ್, ತಾಯಿ ದಿಲ್ಕಾ, ಅಣ್ಣ ದಾದಾಪೀರ್, ಅತ್ತಿಗೆ ಹೀನಾ ಬಾನು, ತಂಗಿ ಶಾಹೀರ ಬಾನು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಹಣ ಚಿನ್ನಾಭರಣ ಪಾರ್ಥ ಚಟರ್ಜಿಗೆ ಸೇರಿದ್ದು: ಇಡಿ ತನಿಖೆ ವೇಳೆ ಬಾಯ್ಬಿಟ್ಟ ನಟಿ ಅರ್ಪಿತಾ