ಕರ್ನಾಟಕ

karnataka

ETV Bharat / state

ವರ್ಷ ಕಳೆದ್ರೂ ರಚನೆಯಾಗದ ವಿಜಯನಗರ ಜಿಲ್ಲೆ ಕನಸು: ಉಪ ಚುನಾವಣೆಗೆ ಸೀಮಿತವಾದ ಬಿಎಸ್​ವೈ ಘೋಷಣೆ

ವಿಜಯನಗರ ಜಿಲ್ಲೆ ಎಂದು ಘೋಷಣೆ ಮಾಡಲು ಬಿಎಸ್​ವೈ ಸೂಚಿಸಿ ಸೆ.19ಕ್ಕೆ ಒಂದು ವರ್ಷವಾಯಿತು. ಆದರೆ, ಇದುವರೆಗೂ ಉಪ ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Vijayanagar District Declaration is only for by election slogan
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Sep 20, 2020, 12:12 AM IST

ಹೊಸಪೇಟೆ: ವಿಜಯನಗರ ಜಿಲ್ಲೆ ಎಂದು ಘೋಷಣೆ ಮಾಡಲು ಬಿಎಸ್​ವೈ 2019 ಸೆ.19ರಲ್ಲಿ ಸೂಚಿಸಿದ್ದರು. ಆದರೆ, ಒಂದು ವರ್ಷ ಕಳೆದರೂ ವಿಜಯನಗರ ಜಿಲ್ಲೆ ರಚನೆ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಈ ಘೋಷಣೆ ಕೇವಲ ಉಪ ಚುನಾವಣೆಗೆ ಸೀಮಿತವಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

ಬಿಎಸ್​ವೈ ಘೋಷಣೆ ಪತ್ರ

ಆನಂದ ಸಿಂಗ್ ವಿಜಯನಗರ ಜಿಲ್ಲೆ ಮಾಡುವಂತೆ ಆಗ್ರಹಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿಯಿಂದ ಉಪಚುನಾವಣೆಯನ್ನು ಎದುರಿಸುತ್ತಾರೆ.‌ ಬಳಿಕ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ವಿರುದ್ಧ ಜಯ ಗಳಿಸಿದ್ದು, ಈಗ ಇತಿಹಾಸ. ಆದರೆ, ವಿಜಯನಗರ ಜಿಲ್ಲೆ ರಚನೆ ವಿಷಯ ಮಾತ್ರ ಗೌಣವಾಗಿದೆ.

ರಾಜೀನಾಮೆ ಸಲ್ಲಿಸಿದ್ದು ಯಾಕೆ?: ವಿಜಯನಗರ ಜಿಲ್ಲೆ ಮಾಡಬೇಕು. ಜಿಂದಾಲ್​ಗೆ ಸರ್ಕಾರಿ ಭೂಮಿಯನ್ನು ಪರಭಾರೆ ಮಾಡಬಾರದು. ಅಲ್ಲದೇ, ಹೊಸಪೇಟೆಯಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಾಗಿತ್ತು. ಈ ಬೇಡಿಕೆಗಳು ಸೇರಿದಂತೆ ವಿಜಯನಗರ ಜಿಲ್ಲೆಯ ವಿಷಯ ಇದೀಗ ಗೌಣವಾಗಿದೆ.

ಜಿಂದಾಲ್ ಪರಭಾರೆ ವಿಷಯ ಕುರಿತು ಆನಂದ ಸಿಂಗ್ ಈವರೆಗೂ ಮಾತನಾಡಿಲ್ಲ.‌ ಏತ ನೀರಾವರಿಗೆ ಅನುದಾನ ತರಲು ಯಶಸ್ವಿಯಾಗಿದ್ದಾರೆ.‌ ಆದರೆ, ಯೋಜನೆ ಅನುಷ್ಠಾನದ ಕುರಿತು ಆನಂದ ಸಿಂಗ್ ಅವರು ತಿಳಿಸಬೇಕಾಗಿದೆ.

ತುಟಿ ಬಿಚ್ಚದ ಯಡಿಯೂರಪ್ಪ: ಕಳೆದ ವರ್ಷದ ಇದೇ ದಿನ ಬಳ್ಳಾರಿ ಜಿಲ್ಲೆಯ 11 ಕಂದಾಯ ತಾಲೂಕಗಳು ಹಾಗೂ 3 ಉಪ ವಿಭಾಗ ಕಂದಾಯ ಒಳಗೊಂಡಿದೆ. ಕೆಲ ಪ್ರದೇಶದಿಂದ ಬಳ್ಳಾರಿ ಕೇಂದ್ರ ಸ್ಥಾನಕ್ಕೆ ತೆರಳಬೇಕಾದರೇ 200 ಕಿ.ಮೀ.ಆಗುತ್ತದೆ. ಸಾರ್ವಜನಿಕ ಆಡಳಿತ ಹಿತ ದೃಷ್ಟಿಯಿಂದ ಬಳ್ಳಾರಿಯ ಜಿಲ್ಲೆಯ ಮೂಲ ಐದು ತಾಲೂಕುಗಳಾದ ಬಳ್ಳಾರಿ, ಕುರುಗೋಡ, ಸಿರಗುಪ್ಪ, ಸಂಡೂರು, ಕೂಡ್ಲಿಗಿ ವ್ಯಾಪ್ತಿಗೆ ಹಾಗೂ ಇನ್ನುಳಿದ ಆರು ತಾಲೂಕುಗಳಾದ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ ತಾಲೂಕುಗಳನ್ನು ಸೇರಿಸಿಕೊಂಡು ವಿಜಯನಗರ ಜಿಲ್ಲೆಯನ್ನಾಗಿ ಮಾಡುವುದು ಅವಶ್ಯಕತೆ ಇದೆ. ಈ ವಿಷಯವನ್ನು ಸಚಿವ ಸಂಪುಟದಲ್ಲಿ ಸಭೆಯಲ್ಲಿ ಮಂಡಿಸಬೇಕು ಎಂದು ವಿಧಾನಸೌಧದಿಂದ ಪತ್ರವನ್ನು ಹೊರಡಿಸಿದ್ದರು.

ರೆಡ್ಡಿಗಳ ವಿರೋಧ: ಬಳ್ಳಾರಿಯ ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಅಖಂಡ ಜಿಲ್ಲೆ ಜಪ‌ ಮಾಡುತ್ತಿದ್ದಾರೆ. ಬಳ್ಳಾರಿಯಿಂದ ಹೊಸಪೇಟೆಯನ್ನು ಬೇರ್ಪಡಿಸಲು ಅವರು ಒಪ್ಪುತ್ತಿಲ್ಲ. ಈ ವಿರೋಧ ಯಡಿಯೂರಪ್ಪ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ ವಿಜಯನಗರ ಜಿಲ್ಲೆ ಮಾಡುವುದಕ್ಕೆ ಮುಂದಾಗುತ್ತಿಲ್ಲ ಎಂಬ‌ ಮಾತುಗಳು ಕೇಳಿ ಬರುತ್ತಿವೆ. ವಿಜಯನಗರ ಜಿಲ್ಲೆಯಾಗಲಿದೆ.‌ ಈ ಕುರಿತು ವಿಶ್ವಾಸವಿದೆ. ಎಲ್ಲರ ಸಹಕಾರದಿಂದ ವಿಜಯನಗರ ಜಿಲ್ಲೆ ರಚನೆ‌ ಮಾಡಲಾಗುವುದು ಎಂದು ಸಚಿವ ಆನಂದ ಸಿಂಗ್ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.‌ ಆದರೆ, ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ABOUT THE AUTHOR

...view details