ಬಳ್ಳಾರಿ: ರೈತರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದಿಂದ ಪಾವಗಡಕ್ಕೆ ಕುಡಿವ ನೀರು ಕೊಂಡೊಯ್ಯುವ ಯೋಜನೆಗೆ ತುಂಗಭದ್ರ ರೈತ ಸಂಘದ ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪಾವಗಡ ಕುಡಿಯುವ ನೀರಿನ ಯೋಜನೆಗೆ ತುಂಗಭದ್ರ ರೈತ ಸಂಘ ವಿರೋಧ
ರೈತರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದಿಂದ ಪಾವಗಡಕ್ಕೆ ಕುಡಿವ ನೀರು ಕೊಂಡೊಯ್ಯುವ ಯೋಜನೆಗೆ ತುಂಗಭದ್ರ ರೈತ ಸಂಘದ ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ತುಂಗಭದ್ರ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಪುರುಷೋತ್ತಮ ಗೌಡ ಮಾತನಾಡಿ, ನೆರೆಯ ಆಂಧ್ರ ಪ್ರದೇಶದ ವಿಜಯವಾಡ ಟಿಬಿ ಬೋರ್ಡ್ ಮಂಡಳಿ ಅಮರಾವತಿಯಲ್ಲಿ ಫೆ. 15ರಂದು ನಡೆದ ಸಭೆಯಲ್ಲಿ ಪಾವಗಡ ಕುಡಿವ ನೀರಿನ ಯೋಜನೆಗೆ ಅಂದಾಜು 2.3 ಟಿಎಂಸಿಯಷ್ಟು ತುಂಗಭದ್ರ ಜಲಾಶಯದ ನೀರು ಬಿಡಲು ಅಧಿಕಾರ ವರ್ಗ ಅಂಕಿತ ಹಾಕಿದ್ದಾರೆ. ಅದು ಕೂಡ ಕರ್ನಾಟಕ ಕೋಟಾದಡಿ ನೀರು ಹರಿಬಿಡಲು ಸೂಚನೆ ನೀಡಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ರೈತರಿಗೆ ಭಾರೀ ಅನ್ಯಾಯ ಆಗುತ್ತದೆ. ಇನ್ನು ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ರೈತರಿಗೆ ಪಾವಗಡಕ್ಕೆ ಕುಡಿವ ನೀರು ಪೂರೈಕೆ ಯೋಜನೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದರು.
ಇಷ್ಟಾದ್ರೂ ಕೂಡ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಶಾಸಕರು, ಸಂಸದರು ಸುಮ್ಮನೆ ಕುಳಿತಿದ್ದು, ಪಾವಗಡ ಕುಡಿವ ನೀರು ಯೋಜನೆ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಾಗೆಯೇ ವಾಣಿವಿಲಾಸ ಸಾಗರ ಅಥವಾ ಹರಿಹರದಿಂದ ಪಾವಗಡಕ್ಕೆ ಕುಡಿವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.