ಬಳ್ಳಾರಿ:ಲೋಕ ಕಲ್ಯಾಣಾರ್ಥ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವ ಸಲುವಾಗಿಯೇ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ್ಬೀಹಾಳು ಗ್ರಾಮದ ವೃದ್ಧರೊಬ್ಬರು ಪಾದಯಾತ್ರೆ ಕೈಗೊಂಡಿದ್ದಾರೆ.
ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಕೈಗೊಂಡ ಇಳಿ ವಯಸ್ಸಿನ ಜೀವ!
ಸಮಾಜದಲ್ಲಿ ಶಾಂತಿ ನೆಲೆಸಬೇಕೆಂಬ ಸಾಮಾಜಿಕ ಕಳಕಳಿಯಿಂದ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರು ಮಹಾರಾಷ್ಟ್ರ ರಾಜ್ಯದಲ್ಲಿನ ಪಂಡರಿನಾಥನ ದೇಗುಲಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ್ಬೀಹಾಳು ಗ್ರಾಮದ ನಿವಾಸಿಯಾದ ಡಿ.ಪ್ರಹ್ಲಾದ ಶೆಟ್ರು ಭಜನೆ ಪರಿಕರ ಹಿಡಿದುಕೊಂಡು ವಿಠಲನ ಸ್ಮರಿಸುತ್ತಾ ಕಾಲ್ನಡಿಗೆ ಜಾಥಾ ಆರಂಭಿಸಿದ್ದಾರೆ. ಕೂಡ್ಲಿಗಿಯಿಂದ ಪಂಡರಾಪುರದ ವಿಠ್ಠಲ ದೇಗುಲದವರೆಗೆ ಅಂದಾಜು 470 ಕಿ.ಮೀ. ಇದ್ದು, ಪ್ರತಿ ದಿನ 60 ಕಿಲೋ ಮೀಟರ್ನಂತೆ ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯುದ್ಧಕ್ಕೂ ಪಂಡರಿನಾಥನ ಸ್ಮರಣೆ ಹಾಗೂ ಭಜನೆ ಪದಗಳನ್ನು ಹಾಡುತ್ತಾ ಮುಂದೆ ಸಾಗುತ್ತಾ ನೋಡುಗರ ಗಮನ ಸೆಳೆದಿದ್ದಾರೆ.
ಇಂದಿನಿಂದ ಸತತ ಎಂಟು ದಿನಗಳ ಕಾಲ ಈ ಇಳಿ ವಯಸ್ಸಿನ ಜೀವ ಪಾದಯಾತ್ರೆ ಮಾಡಲಿದ್ದು, ಹಗಲು ರಾತ್ರಿ ಎನ್ನದೇ, ಮಳೆ ಹಾಗೂ ಗಾಳಿ ಎನ್ನದೇ ಕಾಲ್ನಡಿಗೆಯಲ್ಲೇ ಮುಂದೆ ಸಾಗಲಿದ್ದಾರೆ. ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದ ಈ ಪ್ರಹ್ಲಾದ ಶೆಟ್ರು 1987ರಿಂದ ಪ್ರತಿ ವರ್ಷವೂ ಪಾದಯಾತ್ರೆ ಮಾಡುತ್ತಿದ್ದು, ಕಳೆದ 30 ವರ್ಷಗಳಿಂದ ಸರಿಸುಮಾರು 50 ಬಾರಿ ಏಕಾಂಗಿಯಾಗಿ ಪಾದಯಾತ್ರೆ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಪಂಡರಿನಾಥನ ದೇಗುಲವಿದ್ದು, ವಿಠ್ಠಲ ದೇವರ ಮಹಿಮೆ ಅಪಾರವಾದದು. ಈ ದೇಶದಲ್ಲಿ ಶಾಂತಿ ನೆಲೆಸಬೇಕು. ಯುವ ಜನರು ಆಧ್ಯಾತ್ಮದತ್ತ ವಾಲಬೇಕು. ವಾಟ್ಸಪ್, ಫೇಸ್ಬುಕ್ ಹಾಗೂ ದೃಶ್ಯ ಮಾಧ್ಯಮಗಳ ಬಳಕೆ ಕಡಿಮೆ ಆಗಬೇಕೆಂಬುದೇ ನನ್ನ ಮಹದಾಸೆಯಾಗಿದೆ ಎನ್ನುತ್ತಾರೆ ಪ್ರಹ್ಲಾದ ಶೆಟ್ರು.