ಕರ್ನಾಟಕ

karnataka

ETV Bharat / state

'ಚಿತ್ರಕಲಾ ಯಾತ್ರೆ ಲೈವ್ ಡ್ರಾಯಿಂಗ್'.. ತೆಲಂಗಾಣದ ಚಿತ್ರಕಲಾ ಶಿಕ್ಷಕನಿಂದ ದೇಶ ಪರ್ಯಟನೆ - ತೆಲಂಗಾಣದ ಚನ್ನೂರು ಪಟ್ಟಣದ ಚಿತ್ರಕಲಾವಿದ

ಕಲೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ತೆಲಂಗಾಣದ ಚನ್ನೂರು ಪಟ್ಟಣದ ಚಿತ್ರಕಲಾವಿದರೊಬ್ಬರು 'ಚಿತ್ರಕಲಾ ಯಾತ್ರಾ ಲೈವ್ ಡ್ರಾಯಿಂಗ್' ಯೋಜನೆಯೊಂದಿಗೆ ದೇಶ ಪರ್ಯಟನೆ ಮಾಡುತ್ತಿದ್ದಾರೆ.

Telanganas travel artist alpula pocham in Hampi
ತೆಲಂಗಾಣದ ಚಿತ್ರಕಲಾ ಶಿಕ್ಷಕನಿಂದ ದೇಶ ಪರ್ಯಟನೆ

By

Published : Jun 27, 2023, 12:42 PM IST

ತೆಲಂಗಾಣದ ಚಿತ್ರಕಲಾ ಶಿಕ್ಷಕನಿಂದ ದೇಶ ಪರ್ಯಟನೆ

ವಿಜಯನಗರ:ದೇಶದಲ್ಲಿನ ಕಲೆ, ಸಂಸ್ಕೃತಿ, ಆಚಾರ ವಿಚಾರದ ಮೂಲಕ ಚಿತ್ರಕಲೆಯ ಪ್ರಾಮುಖ್ಯತೆಯ ಅರಿವು ಮೂಡಿಸಲು ತೆಲಂಗಾಣದ ಕಲಾವಿದರೊಬ್ಬರು 'ಚಿತ್ರಕಲಾ ಯಾತ್ರಾ ಲೈವ್ ಡ್ರಾಯಿಂಗ್' ಯೋಜನೆಯೊಂದಿಗೆ ದೇಶ ಪರ್ಯಟನೆ ಮಾಡುತ್ತಿದ್ದಾರೆ. ಇವರ ಹೆಸರು ಅಲ್ಪುಲಾ ಪೋಚಂ(32). ತೆಲಂಗಾಣದ ಚನ್ನೂರು ಪಟ್ಟಣದ ಚಿತ್ರ ಕಲಾವಿದ. ಸದ್ಯ ವಿಶ್ವವಿಖ್ಯಾತ ಹಂಪಿ ಪರಿಸರದ ಚಿತ್ರಕಲೆಯಲ್ಲಿ ತೊಡಗಿದ್ದಾರೆ.

ಈ ಹಿಂದೆ ಚಿತ್ರಕಲೆಗೆ ಒಂದು ಸ್ಥಾನಮಾನ ಇತ್ತು. ಜಾಗತಿಕ ಯುಗದಲ್ಲಿ ಅವುಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಗೆ ಸಂಬಂಧಿಸಿದ ಕೋರ್ಸ್‌ ಮತ್ತು ನಾಗರಿಕರಲ್ಲಿ ಜೀವನದಲ್ಲಿ ಕಲೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಚಿತ್ರಕಲಾ ಯಾತ್ರೆ ಹಮ್ಮಿಕೊಂಡಿರುವುದಾಗಿ ಪೋಚಂ ತಿಳಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಾನಾ ರಾಜ್ಯಗಳ, ನಾನಾ ಭಾಷೆ, ಆಚಾರ ವಿಚಾರ ಹಾಗೂ ಊಡುಗೆ ತೊಡುಗೆ ಸೇರಿ ವಿಭಿನ್ನ ಸಂಸ್ಕೃತಿ ಹೊಂದಿರುವ ಈ ನೆಲದಲ್ಲಿ ಚಿತ್ರಕಲೆಯ ಮೂಲಕ ಸುಂದರ ಪರಿಸರ ಕಟ್ಟಿಕೊಡಲು ಮುಂದಾಗಿದ್ದಾರೆ.

ಆಂಧ್ರಪ್ರದೇಶದ ಯಾತ್ರೆ ಮುಗಿಸಿಕೊಂಡು ಹಂಪಿಗೆ ಭೇಟಿ ನೀಡಿರುವ ಈ ಕಲಾವಿದ ಕಳೆದ 11 ದಿನಗಳಿಂದ ವಿರೂಪಾಕ್ಷೇಶ್ವರ ದೇಗುಲದಲ್ಲಿ ಆಶ್ರಯ ಪಡೆದಿದ್ದಾರೆ. ದೇಗುಲದಲ್ಲಿ ಸಿಗುವ ಪ್ರಸಾದ ಸ್ವೀಕರಿಸಿ ಇಲ್ಲಿನ ಕಲ್ಲಿನ ರಥ, ಉಗ್ರ ನರಸಿಂಹ, ವಿಜಯವಿಠಲ, ಕಮಲ್‌ ಮಹಾಲ್, ವಿರೂಪಾಕ್ಷೇಶ್ವರ ದೇಗುಲ, ನದಿ ತೀರ ಸೇರಿದಂತೆ ಈ ಪರಿಸರದ ನಾನಾ ರೀತಿಯ ಚಿತ್ರಕಲೆಗಳ್ನು ಬಿಡಿಸುತ್ತಿದ್ದಾರೆ.

ಖರ್ಚು ವೆಚ್ಚ ಹೇಗೆ?:ಚಿತ್ರಕಲಾ ಯಾತ್ರೆ ಮಾಡುವಾಗ ಮೊದಲ ಎರಡು ವರ್ಷ ಯಾರ ಸಹಾಯವಿಲ್ಲದೇ ಚಿತ್ರಗಳನ್ನು ಬಿಡಿಸುತ್ತಿದೆ. ನಂತರ ಹೋಗುವ ಸ್ಥಳಗಳಲ್ಲಿ ಸ್ನೇಹಿತರು, ಬಂಧುಗಳಿದ್ದರೆ ವಸತಿ ವ್ಯವಸ್ಥೆ ಮಾಡುತ್ತಾರೆ. ಇಲ್ಲ ಎಂದರೆ ದೇಗುಲ, ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತೇನೆ. ಅಂಗಡಿ ಮುಂಗಟುಗಳಿಗೆ ಹೋಗಿ ಲೈವ್ ಚಿತ್ರಗಳನ್ನು ಬಿಡಿಸಿಕೊಟ್ಟರೆ ಕೆಲವರು ಊಟ, ಇನ್ನೂ ಕೆಲವರು ಬಟ್ಟೆ ಕೊಡಿಸುತ್ತಾರೆ. ಇನ್ನೂ ಕೆಲವರು ಇಂತಿಷ್ಟು ಧನ ಸಹಾಯ ಕೂಡ ಮಾಡುತ್ತಾರೆ. ಇಲ್ಲ ಎಂದರೆ ಮುಂದಿನ ಊರಿಗೆ ನಡೆದುಕೊಂಡು ಹೋಗುತ್ತೇನೆ. ಹಣ ಇದ್ದರೆ ರೈಲು, ಬಸ್‌ಗಳಲ್ಲಿ ಪ್ರಯಾಣ ಮಾಡುತ್ತೇನೆ ಎಂದು ತಿಳಿಸಿದರು.

ಯಾತ್ರೆ ಉದ್ದೇಶವೇನು?: ತೆಲಂಗಾಣದ ಚನ್ನೂರು ಪಟ್ಟಣದ ಕೃಷಿ ಕೂಲಿ ಕಾರ್ಮಿಕನ ಮಗ ಅಲ್ಪುಲಾ ಪೋಚಂ ಕಲಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಕ್ಕೆ ಸ್ನೇಹಿತರಿಂದ ಟೀಕೆ, ಅಪಹಾಸ್ಯಕ್ಕೆ ಒಳಗಾಗಿದ್ದರು. ಮಹಿಳೆಯರ ಚಿತ್ರಗಳನ್ನು ಬಿಡಿಸಿದ್ದಕ್ಕಾಗಿ ಸ್ಥಳೀಯರಿಂದ ಅವಮಾನಿಸಲಾಯಿತು. ಆದಾಗ್ಯೂ, ಈ ಅಸಾಂಪ್ರದಾಯಿಕ ಡೊಮೇನ್ - ಲೈವ್ ಡ್ರಾಯಿಂಗ್‌ನಲ್ಲಿ ತನಗಾಗಿ ಒಂದು ಗೂಡು ಕೆತ್ತಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.

"ಕಲಾ ಕ್ಷೇತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹುದು ಎಂಬುದನ್ನು ಸಾಬೀತುಪಡಿಸಲು ನಾನು 2017ರ ಡಿಸೆಂಬರ್‌ನಲ್ಲಿ ಹೈದರಾಬಾದ್‌ನ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಚಿತ್ರಕಲೆ ಅಥವಾ ಕಲಾ ಯಾತ್ರೆಯನ್ನು ಪ್ರಾರಂಭಿಸಿದೆ. ನಾನಾ ರಾಜ್ಯಗಳ ಆಕರ್ಷಕವಾದ ದೃಶ್ಯಗಳು ಮತ್ತು ಮನುಷ್ಯರ ನೇರ ಚಿತ್ರಗಳನ್ನು ಬಿಡಿಸಿದ್ದೇನೆ. ಇನ್ನೂ ಕೆಲ ಕಡೆ ಸಂಕಷ್ಟಗಳನ್ನು ಎದುರಿಸಿದ್ದೇೆನೆ" ಎನ್ನುತ್ತಾರೆ ಪೋಚಂ.

25 ರಾಜ್ಯ, 13 ಸಾವಿರ ಚಿತ್ರಕಲೆ:ಕಳೆದ 2017ರ ಡಿಸೆಂಬರ್​ನಿಂದ ವಾರಾಣಸಿಯಲ್ಲಿ ಚಿತ್ರಕಲೆ ಆರಂಭ ಮಾಡಿದ ಕಲಾವಿದ ಪೋಚಂ ಅವರು ಜಮ್ಮು ಕಾಶ್ಮೀರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜಾರಾತ್, ರಾಜಸ್ಥಾನ, ಪಂಜಾಬ್, ಆಂಧ್ರ ಪ್ರದೇಶ ಸೇರಿದಂತೆ ಈಗಲೇ 25 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಈವರೆಗೆ ಆಯಾ ರಾಜ್ಯಗಳಲ್ಲಿನ ಪ್ರಮುಖ ತಾಣಗಳ ಹಾಗೂ ಕಲೆ ಸಂಸ್ಕೃತಿಗಳ ಲೈವ್ 13 ಸಾವಿರ ಚಿತ್ರಗಳನ್ನು ಬಿಡಿಸಿದ್ದಾರೆ. ಇನ್ನೂ ರಾಜ್ಯದ ಬೇಲೂರು, ಊಡುಪಿ, ಬೆಂಗಳೂರು, ಮೈಸೂರು ಸೇರಿದಂತೆ ಗೋವಾ, ಕೇರಳ, ತಮಿಳುನಾಡಿಗೆ ಭೇಟಿ ನೀಡಿ ಚಿತ್ರಕಲಾ ಯಾತ್ರೆಯನ್ನು ಮಾಡಲಿದ್ದಾರೆ.

ದೇಶದಲ್ಲಿನ ಕಣ್ಣಿಗೆ ಕಾಣುವಂತ ಕಲೆ, ಸಂಸ್ಕೃತಿ, ಆಚಾರ ಿಚಾರಗಳನ್ನು ಚಿತ್ರಕಲೆ ಮೂಲ ಕಟ್ಟಿಕೊಡಬೇಕು. ಚಿತ್ರ ಕಲೆಯ ಜಾಗೃತಿ ಮೂಡಿಸಬೇಕು ಎಂದು ಚಿತ್ರಕಲಾ ಯಾತ್ರಾ ಲೈವ್ ಡ್ರಾಯಿಂಗ್ ಯೋಜನೆ ಹಾಕಿಕೊಂಡಿರುವೆ. ಇನ್ನೂ ಕೆಲ ರಾಜ್ಯಗಳು ಬಾಕಿ ಇದ್ದು, ಅವುಗಳನ್ನು ಮುಗಿಸಿಕೊಂಡು ನಮ್ಮೂರಿಗೆ ಮರಳುತ್ತೇನೆ- ಚಿತ್ರಕಲಾವಿದ ಅಲ್ಪುಲಾ ಪೋಚಂ

ಇದನ್ನೂ ಓದಿ:ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ.. ಕಣ್ಮನ ಸೆಳೆದ ಕುಲಕರ್ಣಿ ಕಲಾ ಚಿತ್ರಗಳು

ABOUT THE AUTHOR

...view details