ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಸಹೋದರಿ ಮಾಜಿ ಸಂಸದೆ ಜೆ. ಶಾಂತಾ ಕರ್ನಾಟಕ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಪಕ್ಕದ ಆಂಧ್ರಪ್ರದೇಶದ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ.
ಈ ಬಗ್ಗೆ ಸ್ವತಃ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಮಂಗಳವಾರ ವಿಜಯವಾಡದ ತಾಡಿಪಲ್ಲಿಯಲ್ಲಿರುವ ಸಿಎಂ ಕ್ಯಾಂಪ್ ಆಫೀಸ್‌ನಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ಮಾಜಿ ಸಂಸದೆ ಜೆ. ಶಾಂತಾ ಅವರು ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ ಎಂದು ಶಾಂತಾ ಅವರ ಆಪ್ತ ಮೂಲಗಳು ತಿಳಿಸಿವೆ. ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣ ನಿವಾಸಿಯಾಗಿರುವ ಜೆ.ಶಾಂತಾ ಅವರು ಅನಂತಪುರ ಜಿಲ್ಲೆಯ ಹಿಂದೂಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಿಂದೂಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ನಾಲ್ಕೂವರೆ ಲಕ್ಷ ಮತದಾರರಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ, ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ.
2009ರಲ್ಲಿ ಜೆ. ಶಾಂತಾ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ವಿರುದ್ಧ ಜಯ ಗಳಿಸಿದ್ದರು.
ಇದನ್ನೂ ಓದಿ:ನಾನು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ: ಜಗದೀಶ ಶೆಟ್ಟರ್