ಬಳ್ಳಾರಿ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡೋ ಕೂಗು ಎದ್ದಿರೋದಕ್ಕೆ ರಾಜ್ಯವ್ಯಾಪಿ ಅತೀವ ಪರ-ವಿರೋಧ ವ್ಯಕ್ತವಾಗಿವೆ. ಅದರ ಬೆನ್ನಲ್ಲೇ ಇದೀಗ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಮಠಾಧೀಶರ ಧರ್ಮ ಪರಿಷತ್ನ 15ಕ್ಕೂ ಅಧಿಕ ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.
ಸಿಎಂ ಬಿಎಸ್ವೈ ಬೆಂಬಲಕ್ಕೆ ನಿಂತ ಮಠಾಧೀಶರು ನೆರೆಯ ಆಂಧ್ರ ಪ್ರದೇಶದ ಆದೋನಿ ತಾಲೂಕಿನ ಮಠಾಧೀಶರು ಕೂಡ ಮಠಾಧೀಶರ ಧರ್ಮ ಪರಿಷತ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದೆಂದು ದಾವಣಗೆರೆ ಜಿಲ್ಲೆಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬುಕ್ಕ ಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹಳೇಕೋಟೆ ಮರಿಸ್ವಾಮಿ ಮಠದ ಮರಿಸಿದ್ದ ಮಹಾಸ್ವಾಮೀಜಿ, ಸಿರುಗುಪ್ಪಾದ ಬಸವ ಭೂಷಣ ಮಹಾಸ್ವಾಮೀಜಿ, ಹಿರೇಹಡಗಲಿ ಅಭಿನವ ಹಾಲಸ್ವಾಮಿ ಸೇರಿದಂತೆ 15 ಮಠಾಧೀಶರು ಬೆಂಬಲ ಸೂಚಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಹಡಗಲಿ ಅಭಿನವ ಹಾಲಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಮಾಡೋದು ಬೇಡ ಎಂದಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪನವರು ವೀರಶೈವ ಲಿಂಗಾಯತ ಸಮುದಾಯದ ಸಮರ್ಥ ನಾಯಕರಾಗಿದ್ದಾರೆ. ಈ ಕೋವಿಡ್ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿಎಂ ಸೂಚನೆ ಮೇರೆಗೆ ಅರುಣ್ ಸಿಂಗ್ ಭೇಟಿ ರದ್ದುಗೊಳಿಸಿದ ಬಿಎಸ್ವೈ ಪರ ಶಾಸಕರ ಬಣ
ಎಮ್ಮಿಗನೂರು ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದ್ರೆ ಬಿಜೆಪಿ ಪಕ್ಷ ಆಕ್ಸಿಜನ್ ಕಳೆದುಕೊಳ್ಳಲಿದೆ ಎಂಬ ಅಭಿಪ್ರಾಯವು ವೀರಶೈವ ಲಿಂಗಾಯತ ಸಮುದಾಯದವರಿಂದ ಬಂದಿದೆ. ಸದ್ಯ ಶೇ. 99ರಷ್ಟಿರುವ ಆಕ್ಸಿಜನ್ ಶೇ. 42ರಷ್ಟು ಇಳಿಕೆಯಾಗಲಿದೆ. ಅಂದರೆ ಬಿಜೆಪಿ ಪಕ್ಷವು ಅಸ್ತಿತ್ವದಲ್ಲೇ ಇರಲ್ಲ. ಹೀಗಾಗಿ, ಇನ್ನೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುವರಿಸಬೇಕೆಂದರು.